ಮೈಸೂರು: ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ 100 ಲಿವರ್ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಎನ್.ಜಿ.ಭರತೀಶ ರೆಡ್ಡಿ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ಆಸ್ಪತ್ರೆಗೆ 2003ರಲ್ಲಿ ಮೂತ್ರಪಿಂಡ ಕಸಿಗೆ ಪರವಾನಗಿ ದೊರೆಯಿತು. 2017ರಲ್ಲಿ ಲಿವರ್ ಕಸಿಗೆ ಅನುಮತಿ ಪಡೆಯಿತು. 2020ರಲ್ಲಿ ಬಹು ಅಂಗ ಪ್ರತಿಸ್ಥಾಪನೆಗೆ ಪರವಾನಗಿ ಪಡೆದ ಅಂಗ ಕಸಿ ಕೇಂದ್ರ ಎಂಬ ಮಾನ್ಯತೆ ಗಳಿಸಿತು. ಪ್ರಸ್ತುತ 100 ರೋಗಿಗಳಿಗೆ ಯಶಸ್ವಿಯಾಗಿ ಲಿವರ್ ಕಸಿ ಮಾಡಲಾಗಿದೆ.
ಈ ಮೈಲಿಗಲ್ಲು ತಲುಪಲು ತೀವ್ರ ಚಿಕಿತ್ಸಾ ತಜ್ಞರು, ಪ್ರಖ್ಯಾತ ಶಸ್ತ್ರ ಚಿಕಿತ್ಸಕರು, ಕಸಿ ತಜ್ಞರು, ಅರವಳಿಕೆ ತಜ್ಞರು, ತೀವ್ರ ಚಿಕಿತ್ಸಾ ತಜ್ಞರು, ಅತ್ಯಾಧುನಿಕ ಶಸ್ತ್ರ ಚಿಕಿತ್ಸಾಲಯ ಇದೆ. ಶಸ್ತ್ರ ಚಿಕಿತ್ಸೆಯ ನಂತರದ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಮೀಸಲಾದ ಐಸಿಯು, ಸುಧಾರಿತ ಪ್ರಯೋಗಾಲಯದಿಂದ ಸಮಗ್ರ ಪರೀಕ್ಷೆ, ಅತ್ಯಾಧುನಿಕ ವಿಕಿರಣದ ಶಾಸ್ತ್ರದ ಸೌಲಭ್ಯ ನಿಖರವಾದ ರೋಗ ನಿರ್ಣಯ ಮತ್ತು ಮೇಲ್ವಿಚಾರಣೆಯಿಂದ ಅಂಗ ಕಸಿಯಲ್ಲಿ ಅಪೋಲೋ ಆಸ್ಪತ್ರೆ ಮುಂಚೂಣಿಯಲ್ಲಿದೆ ಎಂದರು.
ದೇಶದಲ್ಲಿ 3 ಲಕ್ಷ, ಕರ್ನಾಟಕದಲ್ಲಿ 12ರಿಂದ 15 ಸಾವಿರ ಅಂಗಾಂಗ ದಾನಕ್ಕಾಗಿ ಕಾಯುತ್ತಿದ್ದಾರೆ. 8ರಿಂದ 10ನಿಮಿಷಕ್ಕೆ 1 ಹೆಸರು ನೋಂದಣಿಯಾಗುತ್ತಿದೆ. ಲಭ್ಯತೆ ಮತ್ತು ಅಗತ್ಯತೆಯ ವ್ಯತ್ಯಾಸ ಬೆಳೆಯುತ್ತಿದೆ. ಸಾವಿರಾರು ರೋಗಿಗಳು ಅಂಗಾಂಗ ದಾನಕ್ಕಾಗಿ ಕಾಯುತ್ತಿದ್ದಾರೆ. ದೇಶದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಅಂಗಾಂಗ ದಾನ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹಿಂದುಳಿದಿದೆ ಎಂದು ಹೇಳಿದರು.
ಯಶಸ್ವಿ ಲಿವರ್ ಕಸಿ ಮಾಡಿಸಿಕೊಂಡ ಬಾಲಕನ ತಂದೆ ಮಾತನಾಡಿ, ಹೊಟ್ಟೆ ನೋವು ಕಾಣಿಸಿಕೊಂಡಿತು. ವಾರ ಕಳೆದರೂ ಕಡಿಮೆಯಾಗಲಿಲ್ಲ. ಪರೀಕ್ಷೆ ಮಾಡಿಸಿದಾಗ ಲಿವರ್ ವೈಫಲ್ಯವಾಗಿರುವುದು ತಿಳಿಯಿತು. ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯಾಗಿ 2-5ವರ್ಷಗಳಾಯಿತು. ಆರೋಗ್ಯವಾಗಿದ್ದಾನೆ ಎಂದು ಹೇಳಿದರು.
ಇನ್ನೋರ್ವ ಮಹಿಳೆ ಮಾತನಾಡಿ, ಅಪೋಲೋ ಆಸ್ಪತ್ರೆ ರೋಗಿಯ ಜೀವವನ್ನು ಮಾತ್ರ ಉಳಿಸಲಿಲ್ಲ. ಕುಟುಂಬದ ಸಂತೋಷವನ್ನು ಮರಳಿ ನೀಡಿತು. ಆಸ್ಪತ್ರೆಯಲ್ಲಿ ಸಿಕ್ಕ ಅತ್ಯುತ್ತಮ ಚಿಕಿತ್ಸೆಯಿಂದ ಜೀವ ಉಳಿಯಿತು ಎಂದು ಹೇಳಿದರು.
ಅಪೋಲೊ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ರಾಜ್‌ಕುಮಾರ್ ಪಿ.ವಧ್ವಾ, ಸಮಗ್ರ ಲೀವರ್ ಆರೈಕೆಯ ಹಿರಿಯ ಸಲಹೆಗಾರರಾದ ಡಾ.ಜಯಂತ್ ರೆಡ್ಡಿ, ಡಾ.ಸಂಜಯ್ ಗೋವಿಲ್, ಡಾ.ಸಂದೀಪ್ ಸತ್ಸಂಗಿ, ಪೀಡಿಯಾಟ್ರಿಕ್ ಗ್ಯಾಸ್ಟ್ರೋ ಎಂಟರೋಲಾಜಿಸ್ಟ್ ಕನ್ಸಲ್ಟೆಂಟ್ ಡಾ.ಆಥಿರಾ ರವೀಂಧ್ರನಾಥನ್, ಸಹಾಯಕ ಸಲಹೆಗಾರ ಡಾ.ಸಾಗರ್ ನಾರಾಯಣ್ ಮುಂತಾದವರಿದ್ದರು.