ತಿ.ನರಸೀಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಆಲಗೂಡು ಗ್ರಾಮದ ಬಳಿ ದಮ್ಮಯ್ಯನಬೋರೆಯಲ್ಲಿ ನಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ಶವ ನಜ್ಜುಗುಜ್ಜಾಗಿದ್ದು ಗುರುತು ಸಿಗದಂತಾಗಿದೆ. ಹೀಗಾಗಿ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮೃತ ವ್ಯಕ್ತಿ ಸುಮಾರು 30 ರಿಂದ 35 ವರ್ಷ ವಯಸ್ಸಿನವನಾಗಿದ್ದು ತಿ.ನರಸೀಪುರ-ಕೊಳ್ಳೇಗಾಲದ ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ರಸ್ತೆ ದಾಟುವ ವೇಳೆ ಭಾರೀ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ, ಎಎಸ್ಐ ದೊಡ್ಡೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.