ಮೈಸೂರು: ಪಾನಮತ್ತನಾಗಿ ಒನ್ವೇ ನಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಚಾಲಕನಿಂದ ಸರಣಿ ಅಪಘಾತವಾಗಿ ನಾಲ್ಕು ಬೈಕ್, ಒಂದು ಕಾರು –ಒಂದು ಆಟೋ ಜಖಂಗೊಂಡು ಒಟ್ಟು ಐದು ಮಂದಿಗೆ ಗಾಯವಾಗಿರುವ ಘಟನೆ ನಗರದ ಕುಕ್ಕರಹಳ್ಳಿಯ ಸಿಗ್ನಲ್ ಬಳಿ ನಡೆದಿದೆ.
ಪಾನಮತ್ತನಾದ ಯುವಕ ತನ್ನ ಹೋಲ್ಸ್ ವ್ಯಾಗನ್ ಕಾರಿನಲ್ಲಿ ವೇಗವಾಗಿ ರಾಂಗ್ ಸೈಡ್ ನಲ್ಲಿ ಸಿಗ್ನಲ್ ಜಂಪ್ ಮಾಡಿ ಎದುರು ಬರುತ್ತಿದ್ದ ನಾಲ್ಕು ಬೈಕ್, ಒಂದು ಕಾರ್ ಹಾಗೂ ಒಂದು ಆಟೋಗೆ ಸರಣಿ ಡಿಕ್ಕಿ ಮಾಡಿದ ಪರಿಣಾಮ ಐದು ಜನರು ತೀವ್ರವಾಗಿ ಗಾಯಗೊಂಡಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸರಣಿ ಅಪಘಾತದಿಂದ ಕುಕ್ಕರಹಳ್ಳಿ ಕೆರೆಯ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಆಗಮಿಸಿದ ಕುವೆಂಪುನಗರದ ಸಂಚಾರಿ ಪೊಲೀಸರು ಕಾರನ್ನು ಅಪಘಾತ ನಡೆದ ಸ್ಥಳದಿಂದ ಕ್ರೇನ್ ಮೂಲಕ ಠಾಣೆಗೆ ತೆಗೆದುಕೊಂಡು ಹೋಗಿ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಪಾನಮತ್ತ ಯುವಕನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿ ತಮ್ಮ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.