News Karnataka Kannada
Wednesday, April 24 2024
Cricket
ಮೈಸೂರು

ರಾಮಾಪುರ ರಾಣೆ ಬಳಿ ನಿರ್ಮಾಣವಾಗಲಿದೆ ವೀರಪ್ಪನ್‌ ಹುತಾತ್ಮರಿಗಾಗಿ ಸ್ಮಾರಕ

Photo Credit :

ರಾಮಾಪುರ ರಾಣೆ ಬಳಿ ನಿರ್ಮಾಣವಾಗಲಿದೆ ವೀರಪ್ಪನ್‌ ಹುತಾತ್ಮರಿಗಾಗಿ ಸ್ಮಾರಕ

ಚಾಮರಾಜನಗರ: ಕುಖ್ಯಾತ ದಂತಚೋರ ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಜಿಲ್ಲೆಯ ಹುತಾತ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೆನಪನ್ನು ಹಸಿರಾಗಿಸಲು ಮತ್ತು ಗೌರವ ಅರ್ಪಿಸಲು ರಾಮಾಪುರ ಪೋಲೀಸ್‌ ಠಾಣೆಯಲ್ಲಿ ಸ್ಮಾರಕ ನಿರ್ಮಿಸುವುದಕ್ಕೆ ಸರ್ಕಾರ ಮುಂದಾಗಿದೆ.

ಈ ಸ್ಮಾರಕ ನಿರ್ಮಾಣದ ಕಲ್ಪನೆ -ಯೋಜನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್‌ ಅವರದ್ದಾಗಿದ್ದು ಅವರು ಈ ಹಿಂದೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಮುಂದೆಯಿಟ್ಟ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ. ಸಚಿವರಾದ ನಂತರ ವೀರಪ್ಪನ್‌ ಹಾವಳಿ ಇದ್ದ ಸಾಕಷ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವರು ಸದರಿ ಪ್ರದೇಶಗಳ ಹಿನ್ನೆಲೆಯನ್ನು ತಿಳಿದುಕೊಂಡಿದ್ದರು. ವೀರಪ್ಪನ್ ಅಟ್ಟಹಾಸದ ಬಗ್ಗೆ ಓದಿ ತಿಳಿದುಕೊಂಡು, ವೀರಪ್ಪನ್ ದಾಳಿಯಿಂದ ಬಲಿಯಾದ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಹಸ ಮತ್ತು ಬಲಿದಾನ ಭವಿಷ್ಯದ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು, ಐತಿಹಾಸಿಕ ಸ್ಥಳಗಳಾಗಿ ವಿದ್ಯಾರ್ಥಿಗಳು ವೀಕ್ಷಣೆ ಮಾಡುವ ಪ್ರಮುಖ ಸ್ಥಳವಾಗಬೇಕು ಎಂಬ ಉದ್ದೇಶದಿಂದ ಮಲೆ ಮಹದೇಶ್ವರ ಬೆಟ್ಟ ಸಮೀಪದಲ್ಲಿ ಕರ್ತವ್ಯಕ್ಕಾಗಿ ಪ್ರಾಣ ಅರ್ಪಿಸಿದ ಅರಣ್ಯ ಸಿಬ್ಬಂದಿ ಮತ್ತು ಪೋಲೀಸರ ಬಲಿದಾನವನ್ನು ಸ್ಮರಿಸಲು ಸ್ಮಾರಕ ನಿರ್ಮಿಸುವ ಚಿಂತನೆ ನಡೆಸಿದ್ದಾರೆ.

 

ಕಳೆದ ಫೆಬ್ರವರಿಯಲ್ಲಿ ಹನೂರು ತಾಲ್ಲೂಕಿನ ರಾಮಾಪುರ ಠಾಣೆಗೆ ಭೇಟಿ ನೀಡಿ ಹಳೆಯ ಕಟ್ಟಡವನ್ನು ವೀಕ್ಷಣೆ ಮಾಡಿದ ಸುರೇಶ್ ಕುಮಾರ್, ಹಳೆಯ ಕಟ್ಟಡದಲ್ಲಿ ಸ್ಮಾರಕ ನಿರ್ಮಿಸುವ ತಮ್ಮ ಪ್ರಸ್ತಾವನೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ತಿಳಿಸಿ, ದಕ್ಷಿಣ ವಲಯದ ಐಜಿಪಿ ಅವರೊಂದಿಗೂ ಮಾತನಾಡಿದ್ದರು. ಚರ್ಚೆಯ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ಮಾರಕ ನಿರ್ಮಾಣದ ಕೆಲಸ ನಮ್ಮ ಇಲಾಖೆಯಿಂದ ಆಗುವ ಬದಲು ಜಿಲ್ಲಾಡಳಿತದ ಹಂತದಲ್ಲಿಯೇ ಆದರೆ ಉತ್ತಮ ಎಂಬ ಸಲಹೆಯಿತ್ತರು.

ಈ ಕುರಿತು ಮಾತನಾಡಿದ ಚಾಮರಾಜನಗರ ಜಿಲ್ಲಾ ಪೋಲೀಸ್‌ ಅಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ಈ ಕುರಿತು ಸಚಿವ ಸುರೇಶ್‌ ಕುಮಾರ್‌ ಅವರು ಹೆಚ್ಚಿನ ಅಸ್ಥೆ ವಹಿಸಿದ್ದು ಈಗ ಸ್ಮಾರಕ ನಿರ್ಮಾಣ ಇನ್ನೂ ಯೋಜನಾ ಹಂತದಲ್ಲಿದೆ. ಸಚಿವರ ಮುಂದಿನ ಭೇಟಿಯ ವೇಳೆಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು. ಎರೆಹಳ್ಳದ ಸ್ಮಾರಕ , ಮೀಣ್ಯಂ ಸ್ಮಾರಕ , ರಾಮಾಪುರ ಸ್ಮಾರಕ ಮತ್ತು ಪಾಲಾರ್‌ ಸೇತುವೆ ಯನ್ನು ಹೆರಿಟೇಜ್‌ ವಾಕ್‌ ಮಾದರಿಯಲ್ಲಿ ಅಭಿವೃದ್ದಿ ಪಡಿಸುವ ಯೋಜನೆ ಇದೆ ಎಂದರು.

ಈ ಕುರಿತು ಮಲೆ ಮಹದೇಶ್ವರ ಬೆಟ್ಟ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ ಏಡು ಕೊಂಡಲು ಅವರು ಪ್ರತಿಕ್ರಿಯಿಸಿ ಡಿಸಿಎಫ್‌ ಶ್ರೀನಿವಾಸನ್‌ ಅವರ ಹತ್ಯೆ ಮಾಡಿದ ಎರೆ ಹಳ್ಳ. ಮತ್ತು ಮೀಣ್ಯಂ ಬಳಿಯ ಬೂದಿಕೆರೆಹಳ್ಳ ದಲ್ಲಿ ಈಗಾಗಲೇ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದರು.

 

* ಗೋಪಿನಾಥಂ ಬಳಿಯ ಎರೆಹಳ್ಳ ದಲ್ಲಿ ೧೯೯೧ರ ನವೆಂಬರ್‌ನಲ್ಲಿ ಶಾಂತಿ ಮಾರ್ಗದಿಂದ ವೀರಪ್ಪನ್‌ನನ್ನು ಮನವೊಲಿಸಲು ಹೋಗಿದ ಡಿಸಿಎಫ್ ಶ್ರೀನಿವಾಸನ್ ಅವರ ತಲೆಯನ್ನು ವೀರಪ್ಪನ್ ಕತ್ತರಿಸಿದ್ದನು.

* ಮೀಣ್ಯಂ ಬಳಿಯ ಬೂದಿಕೆರೆ ಹಳ್ಳದಲ್ಲಿ ೧೯೯೨ ಆಗಸ್ಟ್ ೧೪ರಂದು ವೀರಪ್ಪನ್ ಸೆರೆ ಕಾರ್ಯಾಚರಣೆಗೆ ಹೋದ ಎಸ್ಪಿ ಹರಿಕೃಷ್ಣ, ಸಬ್ ಇನ್ಸ್‌ಪೆಕ್ಟರ್ ಶಕೀಲ್ ಅಹಮದ್, ಪೊಲೀಸರಾದ ವೃಷಭೇಂದ್ರಪ್ಪ, ನಾಗರಾಜ, ಅಪ್ಪಚ್ಚು, ಕಾಳಪ್ಪ, ಸುಂದರ್ ಅವರನ್ನು ಹತ್ಯೆ ಮಾಡಿದ್ದನು.

* ರಾಮಾಪುರ ಠಾಣೆಗೆ ೧೯೯೨ ಮೇ ೧೯ರಂದು ರಾತ್ರಿ ಧಾಳಿ ಮಾಡಿದ ಹಂತಕ ವೀರಪ್ಪನ್‌ ಪಡೆ ಪೇದೆಗಳಾದ ಇಳಂಗೋವನ್, ಗೋವಿಂದರಾಜು, ಪ್ರೇಮ್‌ಕುಮಾರ್, ರಾಚಪ್ಪ, ಸಿದ್ದರಾಜ ಎಂಬವರನ್ನು ಹತ್ಯೆ ಮಾಡಿ, ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದನು. ಈ ಠಾಣೆಯ ಕಟ್ಟಡವ ಸುಮಾರು ೧೦೦ ಹೆಚ್ಚು ವರ್ಷಗಳಷ್ಟು ಹಳೆಯದಾಗಿದ್ದು ಬ್ರಿಟಿಷರ ಕಾಲದ ನಿರ್ಮಾಣವಾಗಿದೆ.

ವೀರಪ್ಪನ್ ರಾಮಾಪುರ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರನ್ನು ಕೊಂದಿದ್ದು, ಎರೆಹಳ್ಳದಲ್ಲಿ ಡಿಸಿಎಫ್ ಶ್ರೀನಿವಾಸನ್ ಮತ್ತು ಎಸ್ಪಿ ಹರಿಕೃಷ್ಣ, ಎಸ್‌ಐ ಶಕೀಲ್ ಅಹಮದ್ ಅವರು ಹತ್ಯೆಯಾದ ಸ್ಥಳಗಳು ಸ್ಮಾರಕವಾಗುವುದರಿಂದ ನಮ್ಮ ಭವಿಷ್ಯದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ, ಈ ಹುತಾತ್ಮ ಅಧಿಕಾರಿಗಳ ಬಗ್ಗೆ ತಿಳಿಯುವಂತಾಗಬೇಕು ಎಂಬ ಉದ್ದೇಶ ನನ್ನದಾಗಿದೆ. ಈ ಉದ್ದೇಶದಿಂದ ರಾಮಾಪುರ ಠಾಣೆಗೆ ಭೇಟಿ ನೀಡಿ ಬಂದ ನಂತರ ಸ್ಮಾರಕ ಮಾಡುವ ವಿಷಯ ಪ್ರಸ್ತಾಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದೆ. ಅವರು ಒಪ್ಪಿಕೊಂಡು ಕೆಲಸ ಜಿಲ್ಲಾಡಳಿತದ ಹಂತದಲ್ಲಿಯೇ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆಂದು ಅವರು ಕೂಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ನಾನು ಕೂಡ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು