News Karnataka Kannada
Friday, April 19 2024
Cricket
ಮೈಸೂರು

ಮೈಸೂರು ಆಡಳಿತ ಬಿಕ್ಕಟ್ಟು ಶಮನಕ್ಕೆ ಸಿಎಂ ಮಧ್ಯ ಪ್ರವೇಶಿಸಲಿ: ಮಾಜಿ ಶಾಸಕ ವಾಸು ಪತ್ರ

Photo Credit :

ಮೈಸೂರು ಆಡಳಿತ ಬಿಕ್ಕಟ್ಟು ಶಮನಕ್ಕೆ ಸಿಎಂ ಮಧ್ಯ ಪ್ರವೇಶಿಸಲಿ: ಮಾಜಿ ಶಾಸಕ ವಾಸು ಪತ್ರ

ಮೈಸೂರು: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದಕ್ಷ ಅಧಿಕಾರಿಯಾಗಿ ಜನರ ಮೆಚ್ಚುಗೆ ಗಳಿಸಿರುವ ಮೈಸೂರು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ಸೇವೆ ಅತ್ಯಗತ್ಯವಾಗಿದೆ. ಸರ್ಕಾರ ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಸ್ವೀಕರಿಸಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮಧ್ಯೆ ಪ್ರವೇಶಿಸಿ ಜಿಲ್ಲೆಯಲ್ಲಿ ಉದ್ಭವಿಸಿರುವ ಆಡಳಿತ ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ಮಾಜಿ ಶಾಸಕ ವಾಸು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಅವರು, ಜಿಲ್ಲೆಯಲ್ಲಿ ಆಡಳಿತವೇ ಕುಸಿದು ಬೀಳುವ ಪರಿಸ್ಥಿತಿಗೆ ತಲುಪಿರುವುದು ದುರದೃಷ್ಟಕರ. ಈ ಬಿಕ್ಕಟ್ಟಿಗೆ ತಕ್ಷಣವೇ ಕೊನೆ ಹಾಡಬೇಕೆಂದು ಒತ್ತಾಯಿಸಿದ್ದಾರೆ. ಅರಮನೆ ನಗರ ಮೈಸೂರು ದೇಶದ ಸಾಂಸ್ಕೃತಿಕ ನಗರಿ ಮತ್ತು ಸ್ವಚ್ಛ ನಗರ ಎಂದು ಪ್ರಸಿದ್ದಿಯಾಗಿದೆ. ಮೈಸೂರು ರಾಜಮನೆತನದ ದಕ್ಷ ಆಡಳಿತದ ಫಲವಾಗಿ ಸುವ್ಯವಸ್ಥಿತ ನಗರವಾಗಿ ರೂಪುಗೊಂಡ ಮೈಸೂರು ಈಗಲೂ ಈ ಛಾಪನ್ನು ಉಳಿಸಿಕೊಂಡಿದೆ. ಇದರಲ್ಲಿ ಇಲ್ಲಿನ ಪ್ರಜ್ಞಾವಂತ ಮತ್ತು ಪ್ರಬುದ್ಧ ನಾಗರಿಕರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ನೌಕರ ವರ್ಗದ ಪಾಲೂ ಇದೆ. ಇಂದಿನ ಮುಖ್ಯಕಾರ್ಯದರ್ಶಿ ರವಿಕುಮಾರ್ (ಮೈಸೂರು ಮಹಾನಗರಪಾಲಿಕೆ) ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಮೈಸೂರಿನಲ್ಲಿ ಸೇವೆ ಸಲ್ಲಿಸಿದವರು ಎಂದು ಸ್ಮರಿಸಿದ್ದಾರೆ.
ವರ್ತಮಾನದಲ್ಲಿ ಮೈಸೂರು ಸ್ವಚ್ಛನಗರವೆಂಬ ಪಟ್ಟ ಪಡೆಯಲು ಇಲ್ಲಿನ ಅಧಿಕಾರಿ ಮತ್ತು ನೌಕರ ವರ್ಗದ ಪಾಲು ದೊಡ್ಡದು. ಮೈಸೂರು ಮಹಾನಗರಪಾಲಿಕೆ ಆಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಶಿಲ್ಪಾನಾಗ್ ಕೂಡ ತಮ್ಮ ದಕ್ಷತೆ ಮತ್ತು ಸ್ನೇಹಭಾವದಿಂದ ಸ್ವಚ್ಛನಗರ ಪಟ್ಟ ಸಿಗಲು ಕಾರಣಕರ್ತರಾಗಿದ್ದರು. ಪ್ರಸ್ತುತ ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ ಅವರು ಅವಿರತವಾಗಿ ಶ್ರಮಿಸುತ್ತಿರುವುದು ಜನರು ಮತ್ತು ಜನಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿಯವರ ಮೆಚ್ಚುಗೆ ಗಳಿಸಿದ ಕೋವಿಡ್ ಮಿತ್ರ ಕೇಂದ್ರಗಳ ಸ್ಥಾಪನೆಯೂ ಅವರ ಪರಿಕಲ್ಪನೆ ಎನ್ನುವುದು ಉಲ್ಲೇಖಾರ್ಹ. ಆದರೆ ಮೈಸೂರಿನ ಹಾಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಕಿರುಕುಳದಿಂದ ಬೇಸತ್ತು ತಾವು ರಾಜೀನಾಮೆ ನೀಡುವುದಾಗಿ ಅವರು ತಿಳಿಸಿರುವುದು ಆಘಾತವನ್ನುಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಅವರ ಪರಿಚಯವಿಲ್ಲದಿದ್ದರೂ ನನ್ನನ್ನು ಪ್ರತಿನಿತ್ಯ ಭೇಟಿ ಮಾಡುವ ನಾಗರಿಕರೆಲ್ಲರೂ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಕೇಳಿದ್ದೇನೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮೈಸೂರಿಗೆ ಅವರ ಸೇವೆ ಅತ್ಯಗತ್ಯವಾಗಿದೆ. ಸರಕಾರ ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಸ್ವೀಕರಿಸಬಾರದು. ರಾಜ್ಯದ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅವರ ಸೇವೆ ಮುಂದೆಯೂ ಲಭ್ಯವಾಗಬೇಕು. ನಾನು ಇತ್ತೀಚೆಗೆ ನಡೆಸಿದ ಎರಡೂ ಪತ್ರಿಕಾಗೋಷ್ಠಿಗಳಲ್ಲಿ ಮೈಸೂರು ಜಿಲ್ಲಾಡಳಿತದಲ್ಲಿ ಸಮನ್ವಯತೆ ಮತ್ತು ಮೇಲ್ವಿಚಾರಣೆ ಕೊರತೆಯ ಬಗ್ಗೆ ಗಮನಸೆಳೆದಿದ್ದೆ. ಅದು ಈಗ ಆಡಳಿತವೇ ಕುಸಿದು ಬೀಳುವ ಪರಿಸ್ಥಿತಿಗೆ ತಲುಪಿರುವುದು ದುರದೃಷ್ಟಕರ. ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಈ ಬಿಕ್ಕಟ್ಟಿಗೆ ಕೊನೆ ಹಾಡಬೇಕೆಂದು ಎಂದು ಆಗ್ರಹಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು