News Karnataka Kannada
Sunday, April 21 2024
Cricket
ಮೈಸೂರು

ಮೈಸೂರಿನ ಬೀಚನಹಳ್ಳಿಯಲ್ಲಿ ಶಿಲಾ ಶಾಸನ ಪತ್ತೆ

Photo Credit :

ಮೈಸೂರಿನ ಬೀಚನಹಳ್ಳಿಯಲ್ಲಿ ಶಿಲಾ ಶಾಸನ ಪತ್ತೆ

ಮೈಸೂರು: ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು, ಕಾಡು, ದೇವಸ್ಥಾನ ಮೊದಲಾದ ಕಡೆಗಳಲ್ಲಿ ಅಲ್ಲಲ್ಲಿ ಬೃಹತ್ ಆಕಾರದ ಕಲ್ಲುಗಳು ಕಾಣಸಿಗುತ್ತವೆ.ನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು, ಕಾಡು, ದೇವಸ್ಥಾನ ಮೊದಲಾದ ಕಡೆಗಳಲ್ಲಿ ಅಲ್ಲಲ್ಲಿ ಬೃಹತ್ ಆಕಾರದ ಕಲ್ಲುಗಳು ಕಾಣಸಿಗುತ್ತವೆ. ಇಂತಹ ಬೃಹತ್ ಕಲ್ಲುಗಳನ್ನು ಹುಡುಕಿ ಅವು ಸಾಮಾನ್ಯ ಕಲ್ಲುಗಳಲ್ಲ ಇತಿಹಾಸವನ್ನು ಸಾರುವ ಶಿಲಾ ಶಾಸನಗಳು ಎಂಬುದನ್ನು ಈಗಾಗಲೇ ಇತಿಹಾಸ ಸಹಪ್ರಾಧ್ಯಾಪಕರಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ ಅವರು ಸಂಶೋಧಿಸಿ ಜನಕ್ಕೆ ತೋರಿಸಿಕೊಡುವ ಮೂಲಕ ಸಂರಕ್ಷಣೆ ಮಾಡಿದ್ದಾರೆ.

ಈ ನಡುವೆ ಜಿಲ್ಲೆಯ ಕೆ.ಆರ್.ನಗರ ತಾಲೂಕು, ಮಿರ್ಲೆ ಹೋಬಳಿ, ಬೀಚನಹಳ್ಳಿ ಗ್ರಾಮದ ಮಲ್ಲೇಶ್ವರ ದೇವಾಲಯದ ಹಿಂಭಾಗದಲ್ಲಿ ಭೂಮಿಯಲ್ಲಿ ಹೂತು ಹೋಗಿ ಸ್ವಲ್ಪ ಭಾಗವಷ್ಟೆ ಕಾಣುತ್ತಿದ್ದ ಶಿಲಾಶಾಸನವನ್ನು ಪತ್ತೆ ಹಚ್ಚಲಾಗಿದೆ. ಶಿಲಾ ಶಾಸನದ ಬಳಿಯೇ ದೇವಾಲಯವಿದ್ದು, ಈ ದೇವಾಲಯವನ್ನು ಗ್ರಾಮಸ್ಥರು ಕೊಳ್ಳಿಮಲ್ಲೇಶ್ಪರ ಎಂದು ಕರೆಯುತ್ತಾರೆ.

ದೇವಾಲಯದ ಬಳಿ ಇದೀಗ ದೊರೆತಿರುವ ಶಿಲಾ ಶಾಸನದ ಶೋಧನೆಯನ್ನು ಮೈಸೂರಿನ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹಪ್ರಾಧ್ಯಾಪಕರಾದ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ನಿವೃತ್ತ ಪ್ರಾಧ್ಯಾಪಕರಾದ ಪ್ರೋ.ಎಂ.ಕೆ.ಮೃತ್ಯುಂಜಯ, ಉಪನ್ಯಾಸಕರಾದ ಚರಣ್ ಕುಮಾರ್ ಹಾಗೂ ಗ್ರಾಮದ ನಿವೃತ್ತ ಶಿಕ್ಷಕರಾದ ಬಿ.ಟಿ.ರಾಜಪ್ಪ, ಶಿವಣ್ಣ, ನಾಗೇಂದ್ರ ಹಾಗೂ ಕುಮಾರವರ ಸಹಕಾರದೊಂದಿಗೆ ಮಾಡಿದ್ದು, ಶಾಸನದ ಪಡಿಯಚ್ಚು ತೆಗೆದು ತರುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಶಿಲಾ ಶಾಸನದ ಮೇಲೆ ಚಿತ್ರ ಬರಹವಿದ್ದು ಶಾಸನವನ್ನು ಉಪನ್ಯಾಸಕರಾದ ದೇವರಡ್ಡಿ ಹದ್ಲಿ ಅವರು ಓದಿದ್ದು ಇದರಲ್ಲಿ ಏನಿದೆ ಎಂಬುದನ್ನು ವಿವರಿಸಿದ್ದಾರೆ. ಅದರಂತೆ ಇದು  15ನೇ ಶತಮಾನದ ಅಪ್ರಕಟಿತ ದಾನ ಶಾಸನವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಬೀಚನಹಳ್ಳಿ ಗ್ರಾಮದಲ್ಲಿ ದೊರಕಿರುವ ಮೊದಲ ಶಾಸನವಾಗಿದೆ. ಗ್ರಾಮದ ಮಲ್ಲೇಶ್ವರ ದೇವಾಲಯದ ಹಿಂದೆ ಬೇಲಿ ಗಿಡಗಳ ಮಧಭಾಗದ ಭೂಮಿಯಲ್ಲಿ ಈ ಶಾಸನವು ದೊರಕಿದ್ದು, ಶಾಸನವು 10 ಸಾಲುಗಳಿಂದ ಕೂಡಿದೆ. ಕನ್ನಡ ಭಾಷೆಯಲ್ಲಿದ್ದು, 1 ಶಾಸನ ತ್ರುಟಿತ(ಹಾಳು) ವಾಗಿದೆ. ಶಾಸನದ ಮೇಲ್ಪಾಗದಲ್ಲಿ ಲಿಂಗ ಮತ್ತು ಕರುಸಹಿತ ಹಸುವಿನ ಉಬ್ಬು ಶಿಲ್ಪವಿದೆ.

ಶಾಸನದಲ್ಲಿ ಲಕ್ಷ್ಮಣಗಾವುಂಡನು ರೌದ್ರಿ ಸಂವತ್ಸರದಂದು ಮಲ್ಲಿಕಾರ್ಜನ ದೇವರಿಗೆ ದಾನ ಬಿಟ್ಟ ಗದ್ದೆ ಎಂದಿದೆ. ಲಕ್ಷ್ಮಣ ಗಾವುಂಡ ಯಾರು ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಇವರು ಬಹುಶಃ ಗ್ರಾಮದ ಮಲ್ಲಿಕಾರ್ಜನ (ಈಗಿನ ಮಲ್ಲೇಶ್ಪರ) ದೇವಾಲಯದ ಪೂಜಾ ಕೈಂಕರ್ಯಕ್ಕೆ ಭೂಮಿಯನ್ನು ದಾನ ನೀಡಿರಬಹುದೇನೋ? ವಿಶೇಷವಾಗಿ ಶಾಸನದಲ್ಲಿ ಈ ದಾನವನ್ನು ಅಪಹರಿಸಿದವರು ಭೂಮಿಯಲ್ಲಿ  60 ವರ್ಷ ಹುಳುವಾಗಿ ಜನ್ಮವನ್ನು ಪಡೆದು ಕೊಳ್ಳಲಿ ಎಂಬ ಶಾಪಾಶಯ ಭಾಗವಿರುವ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಮೈಸೂರು ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿದ್ದ ಶಾಸನಗಳು, ವೀರಗಲ್ಲು ಸೇರಿದಂತೆ ಹಲವು ವಿಶೇಷತೆಗಳನ್ನು ಶೋಧನೆ ಮಾಡುವಲ್ಲಿ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ಯಶಸ್ವಿಯಾಗಿದ್ದಾರೆ. ನಮ್ಮ ಸುತ್ತಮುತ್ತ ಹಿಂದಿನ ಕಾಲದ ಹಲವು ಪಳೆಯುಳಿಕೆಗಳಿದ್ದರೂ ಅವುಗಳ ಮಹತ್ವ ತಿಳಿಯುವುದೇ ಇಲ್ಲ. ಅವುಗಳನ್ನು ಸಂಶೋಧಿಸಿದಾಗ ಮಾತ್ರ ಅವುಗಳ ಬಗ್ಗೆ ತಿಳಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು