News Karnataka Kannada
Sunday, April 14 2024
Cricket
ಮೈಸೂರು

ಮಣ್ಣಿನ ಮಡಿಕೆ ಮಾರಾಟಗಾರರ ಬದುಕು ಮೂರಾಬಟ್ಟೆ..!

Photo Credit :

ಮಣ್ಣಿನ ಮಡಿಕೆ ಮಾರಾಟಗಾರರ ಬದುಕು ಮೂರಾಬಟ್ಟೆ..!

 

ಮೈಸೂರು: ಕೊರೋನಾ ಮಹಾಮಾರಿಯ ಹೊಡೆತ ಎಲ್ಲ ಕ್ಷೇತ್ರಕ್ಕೂ ತಟ್ಟಿದ್ದು, ಯಾವುದೋ ಒಂದು ಉದ್ಯಮ ಮಾಡಿಕೊಂಡು ಬದುಕು ಕಟ್ಟಿ ಕೊಂಡಿದ್ದವರು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಜನ ಅಗತ್ಯ ವಸ್ತುಗಳನ್ನು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಕಾರಣದಿಂದಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ದೂರದ ರಾಜ್ಯಗಳಿಂದ ಬಂದು ಮೈಸೂರು ನಗರದ ರಸ್ತೆಬದಿಗಳಲ್ಲಿ ಗುಡಿಸಲು ಹಾಕಿಕೊಂಡು ಮಣ್ಣಿನ ಮಡಿಕೆ, ಮಣ್ಣಿನ ಫಿಲ್ಟರ್ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರು ಲಾಕ್ ಡೌನ್ ಹಿನ್ನಲೆಯಲ್ಲಿ ವ್ಯಾಪಾರವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿದೆ.

ದೂರದ ರಾಜಸ್ಥಾನ, ಬಿಹಾರದಿಂದ ಇಲ್ಲಿಗೆ ಬಂದಿದ್ದು, ವಾಪಾಸ್ ಹೋಗುವಂತೆಯೂ ಇಲ್ಲದಾಗಿದೆ. ಈ ಹಿಂದೆ ಎಲ್ಲರ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದಾಗ ಜನ ಕೂಡ ಮಣ್ಣಿನ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದರು. ಬೇಸಿಗೆಯಲ್ಲಿ ಮಣ್ಣಿನ ಫಿಲ್ಟರ್‍ಗಳನ್ನು ಕೂಡ ಮನೆಗೆ ಕೊಂಡೊಯ್ಯುತ್ತಿದ್ದರು. ಸ್ಥಳೀಯರಿಗಿಂತ ಹೊರಗಿನವರು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣದಿಂದಾಗಿ ಇದ್ಯಾವುದು ನಡೆಯಲೇ ಇಲ್ಲ.

ಒಂದೆಡೆ ಎಲ್ಲಿಂದಲೋ ಬಂದು ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡಿ ಬದುಕು ಸಾಗಿಸುವವರು ಒಂದೆಡೆಯಾದರೆ, ಇನ್ನೊಂದೆಡೆ ತಾತ, ಮುತ್ತಾಂದಿರ ಕಾಲದಿಂದ ಮಣ್ಣಿನ ಪಾತ್ರೆಗಳನ್ನೂ ತಯಾರಿಸುತ್ತಾ… ಮಾರಾಟ ಮಾಡಿ ಬದುಕುತ್ತಿರುವ ಸ್ಥಳೀಯ ಕುಂಬಾರರು ಮತ್ತು ವ್ಯಾಪಾರಿಗಳ ಬದುಕು ಕೂಡ ಸಂಕಷ್ಟದಲ್ಲಿದೆ.

ಇವತ್ತಿಗೂ ಬನ್ನೂರು, ಕಿರುಗಾವಲು, ದೂರ ಗ್ರಾಮಗಳಲ್ಲಿ ಮಣ್ಣಿನ ಮಡಿಕೆ ತಯಾರು ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳಿವೆ. ಅವರು ತಾವು ತಯಾರಿಸಿದ ಪಾತ್ರೆಗಳನ್ನು ತಂದು ನಗರದ ಕೆಲವು ಅಂಗಡಿಗಳಿಗೆ ಮಾರಾಟ ಮಾಡಿ ತೆರಳುತ್ತಾರೆ.

ಹೆಚ್ಚಿನ ಬೇಡಿಕೆಯಿಲ್ಲದ ಕಾರಣ ಅವರಿಂದ ಖರೀದಿಸಿ ಮಾರಾಟ ಮಾಡಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಕೆಲವು ಮಡಿಕೆ ಅಂಗಡಿಗಳಲ್ಲಿ ದಿನಕ್ಕೆ ನೂರು ರೂಪಾಯಿ ಕೂಡ ವ್ಯಾಪಾರವಾಗುತ್ತಿಲ್ಲ. ಮೈಸೂರು ನಗರ ಸೇರಿದಂತೆ ಅಗ್ರಹಾರದ 101 ಗಣಪತಿ ದೇವಾಲಯದ ಬಳಿ, ನಂಜುಮಳಿಗೆ ಮೊದಲಾದ ಕಡೆಗಳಲ್ಲಿ ಮಣ್ಣಿನ ಮಡಿಕೆ ಮಾರಾಟದ ಅಂಗಡಿಗಳಿವೆ.

ಹಲವರು ಕಳೆದ ಮೂರ್ನಾಲ್ಕು ದಶಕಗಳಿಂದ ಮಣ್ಣಿನ ಪಾತ್ರೆಗಳ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಇವತ್ತ ಇವುಗಳನ್ನು ಕೊಳ್ಳುವವರೇ ಇಲ್ಲವಾಗಿದ್ದಾರೆ. ಹೀಗಾಗಿ ಒಂದು ರೂಪಾಯಿಯ ವ್ಯಾಪಾರವೂ ಆಗದೆ ದಿನ ಕಳೆದು ಹೋಗುತ್ತಿದೆ. ಮೊದಲೆಲ್ಲಾ ಹೂಕುಂಡಗಳನ್ನಾದರು ಖರೀದಿಸುತ್ತಿದ್ದರು. ಈಗ ಸಿಮೆಂಟ್‍ನಿಂದ ತಯಾರಾದ ಹೂಕುಂಡಗಳು ಮಾರುಕಟ್ಟೆಗೆ ಬರುವುದರಿಂದ ಅದನ್ನೂ ಕೂಡ ಖರೀದಿಸುವವರೇ ಇಲ್ಲವಾಗಿದ್ದಾರೆ. ಇತರೆ ದಿನಗಳಲ್ಲಿ ಮಡಿಕೆ, ಕುಡಿಕೆ ಕೇಳಿ ಕೊಂಡು ಅಂಗಡಿಗೆ ಬರೋರೇ ಇಲ್ಲವಾಗಿದ್ದು ಯಾರಾದ್ರು ಸತ್ರೆ ಮಾತ್ರ ಬಂದು ಮಡಿಕೆನೋ, ಕುಡಿಕೆನೋ ಕೇಳುತ್ತಾರೆ.

ಕೆಲವರು ವಯಸ್ಸಾದವರು ಹಿಂದಿನಿಂದಲೂ ಮಡಿಕೆ ವ್ಯಾಪಾರ ಮಾಡಿಕೊಂಡು ಬಂದಿದ್ದು ಅದು ಬಿಟ್ಟು ಬೇರೆ ವ್ಯಾಪಾರ ಮಾಡೋದು ಗೊತ್ತಾಗದಂತಾಗಿದೆ. ಆದ್ದರಿಂದ ಮಡಿಕೆ ವ್ಯಾಪಾರವನ್ನು ನಂಬಿ ಬದುಕುತ್ತಿದ್ದವರ ಹೊಟ್ಟೆಗೆ ತಣ್ಣೀರು ಬಟ್ಟೆ ಎನ್ನುವಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು