News Karnataka Kannada
Monday, April 22 2024
Cricket
ಮೈಸೂರು

ದಸರಾ ಆನೆಗಳಿಗೂ ಕ್ವಾರಂಟೈನ್‌

Photo Credit :

ದಸರಾ ಆನೆಗಳಿಗೂ ಕ್ವಾರಂಟೈನ್‌

ಮೈಸೂರು: ಕೊರೋನಾ ಸೋಂಕು ತಗುಲುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಆನೆಗಳನ್ನು ಅರಣ್ಯ ಇಲಾಖೆ ಕ್ವಾರಂಟೈನ್ ನಲ್ಲಿರಿಸಿದೆ.

ಆನೆಗಳನ್ನು ತೂಕ ಮಾಡಿಸಲೂ ಕೂಡ ಹೊರಗೆ ಕರೆದೊಯ್ಯಲಾಗುತ್ತಿಲ್ಲ. ಅರಣ್ಯ ಇಲಾಖೆ ಕೂಡ ಕೆಲ ಕಾರ್ಯವಿಧಾನಗಳನ್ನು ಕೈಬಿಟ್ಟಿದ್ದು, ಆನೆಗಳು, ಮಾವುತರು ಹಾಗೂ ಕಾವಾಡಿಗಳೂ ಕೂಡ ಹೊರಗೆಲ್ಲೂ ತೆರಳದಂತೆ ಕಟ್ಟುನಿಟ್ಟಿನ ನಿಯಗಳನ್ನು ಜಾರಿ ಮಾಡಿದ್ದಾರೆ. ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಜೆ ಅಲೆಕ್ಸಾಂಡರ್ ಅವರು ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ. ಆನೆಗಳು ಹುಣಸೂರಿನ ವೀರನಹೊಸಳ್ಳಿಯಿಂದ ಹೊರಡುವಾಗ ತೂಕ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ದಸರಾ ಗಜಪಡೆಯೊಂದಿಗೆ ಮೈಸೂರು ಅರಮನೆಗೆ ಆಗಮಿಸಿರುವ ಮಾವುತರು, ಕಾವಾಡಿಗಳು, ಸಹಾಯಕರು ಹಾಗೂ ಆನೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಸಿಬ್ಬಂದಿ ಸೇರಿದಂತೆ 19 ಮಂದಿಗೂ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಎಲ್ಲರ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ. 

ಈಗ ಅರಮನೆಯ ಅಂಗಳದಲ್ಲಿ ಕುಶಾಲತೋಪು ಸಿಡಿಸುವ ಡ್ರೈ ತಾಲೀಮು ನಡೆಸಲಾಗುತ್ತಿದೆ. ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಇಂದು ಸಿಡಿಮದ್ದು ಸಿಡಿಸದೆಯೇ ತಾಲೀಮು ನಡೆಸಿದೆ. ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಇದಕ್ಕಾಗಿ ಮುಂಚಿತವಾಗಿ ತಾಲೀಮು ಪ್ರಾರಂಭಿಸಲಾಗಿದೆ. ಸಿಏಆರ್‌ ನ 30 ಸಿಬ್ಬಂದಿ ಕುಶಾಲತೋಪು ಡ್ರೈ ಪ್ರಾಕ್ಟೀಸ್ ನಲ್ಲಿ ಭಾಗಿಯಾಗಿದ್ದರು. ದಸರೆ ವೇಳೆ ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳನ್ನು ಬಳಸಲಾಗುತ್ತದೆ. ಆನೆಗಳು, ಕುದುರೆಗಳು ಬೆದರದಂತೆ ನೋಡಿಕೊಳ್ಳುವುದು ತಾಲೀಮಿನ ಉದ್ದೇಶವಾಗಿದೆ.

ಇನ್ನು ಕೆಲವು ದಿನಗಳಲ್ಲಿ ಆನೆ ಮತ್ತು ಕುದುರೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ಆರಂಭಿಸಲಾಗುತ್ತದೆ. ವಿಜಯದಶಮಿಯ ದಿನ ಅರಮನೆ ಬಳಿ ಪೊಲೀಸರು 21ಬಾರಿ ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಪ್ರತಿಬಾರಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಾಲೀಮು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆನೆಗಳನ್ನು ಹೊರಗಡೆ ಕರೆದುಕೊಂಡು ಹೋಗುವಂತಿಲ್ಲ. ಹೀಗಾಗಿ ಅರಮನೆಯ ಸಮೀಪವೇ ತಾಲೀಮು ನಡೆಯಲಿದೆ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚುತ್ತಲೇ ಇದ್ದು ಸಾರ್ವಜನಿಕರು ಈ ಬಾರಿ ದಸರಾ ಮಹೋತ್ಸವ ಸಂಭ್ರಮದಿಂದ ವಂಚಿತರಾಗಲಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ದಸರಾ ಮಹೋತ್ಸವ ನಡೆಯಲಿದ್ದು, 2000 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು