News Karnataka Kannada
Friday, April 19 2024
Cricket
ಮೈಸೂರು

ಗಾಂಧಿ ಮೈಸೂರಿಗೆ ಬಂದಿದ್ದಾಗ ನಡೆದಿದ್ದೇನು?

Photo Credit :

ಗಾಂಧಿ ಮೈಸೂರಿಗೆ ಬಂದಿದ್ದಾಗ ನಡೆದಿದ್ದೇನು?

ಇವತ್ತು ಅಕ್ಟೋಬರ್ 2. ದೇಶ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಗಾಂಧಿಯನ್ನು ಸ್ಮರಣೆ ಮಾಡಲಾಗುತ್ತಿದೆ. ಮಹಾತ್ಮಗಾಂಧಿ ತಮ್ಮ ಜೀವಿತಾವಧಿಯಲ್ಲಿ ದೇಶದಾದ್ಯಂತ ಪ್ರವಾಸ ಮಾಡಿದ್ದರು. ಹೀಗೆ ಪ್ರವಾಸ ಮಾಡುತ್ತಾ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೂ ಎರಡು ಬಾರಿ ಬಂದಿದ್ದರು.

ಹೀಗೆ ಬಂದಾಗ ಅವರಿಗೆ ಹಲವು ರೀತಿಯ ಅನುಭವವಾಗಿತ್ತು. ಮೊದಲಿನಿಂದಲೂ ಮೈಸೂರು ಅವರಿಗೆ ಪ್ರಿಯವಾದ ತಾಣವಂತೆ. ಹೀಗಾಗಿ ಗಾಂಧೀಜಿ  ಮೈಸೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು 1927ರಲ್ಲಿ. ಅದಾದ ನಂತರ ಕೇವಲ ಏಳು ವರ್ಷಕ್ಕೆ ಅಂದರೆ 1934ರಲ್ಲಿ ಮತ್ತೊಮ್ಮೆ ಭೇಟಿ ನೀಡಿದ್ದರು. ಮೈಸೂರಿಗೆ ಎರಡು ಬಾರಿ ಭೇಟಿ ನೀಡಿದಾಗಲೂ ಅವರು  ಶೇಷಾದ್ರಿ ಅಯ್ಯರ್ ರಸ್ತೆಯ ಶೇಷಾದ್ರಿ ಹೌಸ್‍ನಲ್ಲಿ ತಂಗಿದ್ದರು. ಅವತ್ತಿನ ಶೇಷಾದ್ರಿ ಹೌಸ್ ಇಂದು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಾಗಿದೆ.

ಗಾಂಧೀಜಿ ಮೈಸೂರಿಗೆ ಬಂದ ಸಂದರ್ಭ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಚಳುವಳಿ ಕಾವು ಏರಿತ್ತು. ಎಲ್ಲ್ಲೆಲ್ಲೂ ಗಾಂಧೀಜಿಯವರ ಕರೆಗೆ ಓಗೊಟ್ಟು ಜನ ಬ್ರಿಟೀಷರ ವಿರುದ್ಧ ದಂಗೆ ಎದ್ದಿದ್ದರು. ಹೀಗಾಗಿ ಮೈಸೂರಿಗೆ ಬಂದ ಗಾಂಧೀಜಿ ವಾಸ್ತವ್ಯ ಹೂಡಿದ್ದ ಶೇಷಾದ್ರಿ ಹೌಸ್‍ನಲ್ಲಿ ಬಿಡುವಿನ ವೇಳೆಯಲ್ಲಿ ಚರಕದಿಂದ ನೂಲು ನೇಯುತ್ತಾ.. ಭಜನೆ, ಪ್ರಾರ್ಥನೆಯಲ್ಲಿ ನಿರತರಾಗಿಬಿಡುತ್ತಿದ್ದರು.

ಮೊದಲ ಬಾರಿಗೆ ಗಾಂಧೀಜಿಯವರು ಇಲ್ಲಿಗೆ ಬಂದಾಗ ಆಗ ತಾನೇ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿಯನ್ನು ಉದ್ಘಾಟಿಸಿದ್ದರು. ಎರಡನೇ ಬಾರಿಗೆ ಬಂದಾಗ ಇದೇ ಗಿರಣಿಯ ಕಾರ್ಮಿಕರು ರಾತ್ರಿ ಹಗಲು ಹೆಚ್ಚುವರಿ ಕೆಲಸ ಮಾಡಿ ಅದರಿಂದ ಬಂದ ಹಣವನ್ನು ಗಾಂಧೀಜಿಯವರಿಗೆ ನೀಡಿದ್ದು ಅವತ್ತು ಜನ ಗಾಂಧೀಜಿಯವರ ಹೋರಾಟಕ್ಕೆ ಯಾವ ರೀತಿಯ ಬೆಂಬಲ ನೀಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.

ನಗರಕ್ಕೆ ಆಗಮಿಸಿದ್ದ ಗಾಂಧೀಜಿಯವರು ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಶೋಕಪುರಂಗೆ ತೆರಳಿ ಅಲ್ಲಿನವರಿಗೆ ಹಿತನುಡಿದು ಯೋಗಕ್ಷೇಮವನ್ನು ವಿಚಾರಿಸಿದ್ದರು. ಗಾಂಧೀಜಿ ಆ ಸಂದರ್ಭ ನಗರದ ರಂಗಾಚಾರ್ಲು ಪುರಭವನ (ಟೌನ್‍ಹಾಲ್)ದಲ್ಲಿ ಕಾಂಗ್ರೆಸ್‍ನಿಂದ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ನೆರೆದಿದ್ದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು.

ಈ ಸಂದರ್ಭ ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯವಿರುವ ಖರ್ಚು ವೆಚ್ಚವನ್ನು ಭರಿಸಲು ಸ್ವತಃ ಜನರೇ ತಮ್ಮ ಒಡವೆ, ಹಣಗಳನ್ನು ನೀಡುತ್ತಿದ್ದರು. ಒಡವೆಗಳನ್ನು ಸಭೆಯಲ್ಲೇ ಬಹಿರಂಗ ಹರಾಜು ಹಾಕಿ ಅದರಿಂದ ಬಂದ ಹಣದ ಖರ್ಚು ವೆಚ್ಚಗಳನ್ನು ಅವರು ಸ್ಥಳದಲ್ಲೇ ಪ್ರಕಟಿಸುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಂಡಿದ್ದರು. ಇದು ಜನರಿಗೆ ಅವರ ಮೇಲೆ ವಿಶ್ವಾಸ ನಂಬಿಕೆನ್ನುಂಟು ಮಾಡುತ್ತಿತ್ತು. ಈ ಸಂದರ್ಭ ಕೆ.ಆರ್.ಮಿಲ್‍ನ ಕಾರ್ಮಿಕರು ಹಾಗೂ ಆನಂದ ಭವನ ಹೋಟೆಲ್‍ನ ಕಾರ್ಮಿಕರು, ನೂರಾರು ಮಹಿಳೆಯರು ಸಮಾವೇಶಕ್ಕೆ ಆಗಮಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸಿದ್ದರು.

ಗಾಂಧೀಜಿಯವರು ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಳ್ಳುವ ಹಿರಿಯರು ನಗರದ ಹೃದಯಭಾಗದ ಒಲಂಪಿಯಾ ಟಾಕೀಸ್ ಬಳಿಯ ಹೋಟೆಲ್ ಆನಂದ ಭವನದ ಕಾರ್ಮಿಕರು ತಾವು ದುಡಿದ ಹಣವನ್ನು ಒಟ್ಟು ಸೇರಿಸಿ ಕರಂಡಕವನ್ನು ಖರೀದಿಸಿ ಅದನ್ನು ಉಡುಗೊರೆಯಾಗಿ ಗಾಂಧೀಜಿಯವರಿಗೆ ನೀಡಿದ್ದರಂತೆ. ಅದನ್ನು ಗಾಂಧೀಜಿಯವರು ಟೌನ್‍ಹಾಲ್‍ನಲ್ಲಿ ಹರಾಜು ಹಾಕಿದಾಗ ಹೋಟೆಲ್ ಮಾಲೀಕರು ಅದನ್ನು ಖರೀದಿಸಿದರಂತೆ.

ಹಾಗೆಂದು ಮೈಸೂರಿಗೆ ಭೇಟಿ ನೀಡಿದ ಗಾಂಧೀಜಿಯವರಿಗೆ ಎಲ್ಲವೂ ಸಿಹಿ ಅನುಭವವಾಗಿರಲಿಲ್ಲ. ಇದರ ನಡುವೆ ಕಹಿ ಘಟನೆಯೂ ನಡೆಯಿತಂತೆ ಅದೇನೆಂದರೆ ಗಾಂಧೀಜಿಯವರು ಸಮಾವೇಶವನ್ನುದ್ದೇಶಿಸಿ ಮಾತನಾಡಿದಾಗ ಅದರಿಂದ ಪ್ರಭಾವಿತರಾದ ಹೆಚ್ಚಿನ ಮಹಿಳೆಯರು ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮದೊಂದು ಕಾಣಿಕೆಯಿರಲಿ ಎಂದು ತಾವು ಧರಿಸಿದ್ದ ಒಡವೆಗಳನ್ನೇ ಬಿಚ್ಚಿ ಗಾಂಧೀಜಿಯವರ ಮುಂದಿಟ್ಟರಂತೆ. ಇದನ್ನು ಆ ಮಹಿಳೆಯರ ಪತಿಯಂದಿರಿಗೆ ಸಹಿಸಿಕೊಳ್ಳಲಾಗಲಿಲ್ಲವಂತೆ. ಅವರಿಗೆ ತಮ್ಮ ಪತ್ನಿಯರ ಉದ್ದೇಶವೂ ಗೊತ್ತಾಗಲಿಲ್ಲವಂತೆ ಹೀಗಾಗಿ ಅವರು ಪತ್ನಿಯರ ವಿರುದ್ದ ಹರಿಹಾಯ್ದು ಸಮಾರಂಭದಲ್ಲೇ ಥಳಿಸಿದರಂತೆ ಇದು ಗಾಂಧೀಜಿಯವರ ಮನಸ್ಸಿಗೆ ನೋವುಂಟು ಮಾಡಿತ್ತಲ್ಲದೆ, ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಇನ್ನು ಮುಂದೆ ಎಲ್ಲರೂ ತಮ್ಮ ಸ್ವ ಇಚ್ಚೆಯಿಂದಷ್ಟೆ ನೀಡಿದರೆ ಸ್ವೀಕರಿಸುವುದಾಗಿ ಹೇಳಿ ಹೊರಟು ಹೋದರಂತೆ. ಅದೇ ಕೊನೆ. ಆ ನಂತರ ಗಾಂಧೀಜಿ ಮೈಸೂರಿಗೆ ಬರಲಿಲ್ಲ. ಆದರೆ ಅವರ ಮೈಸೂರು ಭೇಟಿ ಇಂದಿಗೂ ಸ್ಮರಣೀಯ ಎಂದರೆ ತಪ್ಪಾಗಲಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು