News Karnataka Kannada
Friday, April 19 2024
Cricket
ಮೈಸೂರು

ಈ ಬಾರಿಯ ದಸರಾದಲ್ಲಿ ಕೊಡಗಿನ ಗಜಪಡೆಗಳ ದರ್ಬಾರ್

Photo Credit :

ಈ ಬಾರಿಯ ದಸರಾದಲ್ಲಿ ಕೊಡಗಿನ ಗಜಪಡೆಗಳ ದರ್ಬಾರ್

ಮೈಸೂರು: ಕೊರೋನಾದಿಂದಾಗಿ ಈ ಬಾರಿ ಸರಳ ಮತ್ತು ಸಂಪ್ರದಾಯಬದ್ಧವಾಗಿ ದಸರಾ ಆಚರಣೆ ನಡೆಯುತ್ತಿದ್ದು, ಆಚರಣೆ ಕೂಡ ಕೇವಲ ಅರಮನೆಗಷ್ಟೆ ಸೀಮಿತವಾಗಿದೆ. ಹೀಗಾಗಿ ಎಲ್ಲ ದಸರಾ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿಯೇ ನಡೆಯಲಿದೆ.

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾಗಿದ್ದು, ಇದು ಕೂಡ ಅರಮನೆ ಆವರಣದಲ್ಲಿ ನಡೆಯುವುದರಿಂದ ಗಜಪಡೆಯನ್ನು ಐದಕ್ಕೆ ಸೀಮಿತಗೊಳಿಸಿದ್ದು, ಈಗಾಗಲೇ ಆಗಮಿಸಿರುವ ಗಜ ಪಡೆ ತಾಲೀಮಿನಲ್ಲಿ ನಿರತವಾಗಿವೆ. ಇನ್ನೊಂದು ವಿಶೇಷತೆ ಎಂದರೆ ಗಜಪಡೆಯಲ್ಲಿರುವ ಅಂಬಾರಿ ಹೊರುವ ಅಭಿಮನ್ಯುವಿನಿಂದ ಹಿಡಿದು ಪಟ್ಟದ ಆನೆ ವಿಕ್ರಮನ ತನಕ ಐದು ಆನೆಗಳು ಕೊಡಗಿನ ಆನೆ ಶಿಬಿರದಿಂದ ಬಂದಿದ್ದು, ಈ ಬಾರಿಯ ದಸರಾ ಸೂತ್ರಧಾರಿಗಳಾಗಿವೆ.

ಹಾಗೆ ನೋಡಿದರೆ ಇದುವರೆಗೆ ಜಂಬೂಸವಾರಿಯಲ್ಲಿ ಸಂಗೀತದ ಗಾಡಿಯನ್ನು ಎಳೆಯುತ್ತಿದ್ದ ಅಭಿಮನ್ಯು ಈ ಬಾರಿ ಅಂಬಾರಿ ಹೊರುವ ಜವಬ್ದಾರಿಯನ್ನು. ಹೀಗಾಗಿ ಈತನ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಲಾಗಿದೆ. ಸದ್ಯ ಈತನ ವಯಸ್ಸು 54ವರ್ಷವಾಗಿದ್ದು, ಕಳೆದ 21 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2.68 ಮೀಟರ್ ಎತ್ತರ ಹಾಗೂ 3.51ಮೀಟರ್ ಉದ್ದವನ್ನು ಹೊಂದಿದ್ದು ಅಂದಾಜು ತೂಕ 5000 ದಿಂದ 5290 ಕೆಜಿಯಷ್ಟಿದೆ. ಇದನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿದೆ. ಮತ್ತಿಗೋಡು ಶಿಬಿರದಿಂದ ಬಂದಿರುವ ಈತನನ್ನು ಮಾವುತ ವಸಂತ ಮತ್ತು ಕಾವಾಡಿ ರಾಜು ನೋಡಿಕೊಳ್ಳುತ್ತಿದ್ದಾರೆ.

ದುಬಾರೆಯ ಚೆಲುವೆಯಾಗಿರುವ ಕಾವೇರಿ ಕಳೆದ ಒಂಬತ್ತು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಅನುಭವ ಹೊಂದಿರುವ  ಹೆಣ್ಣಾನೆಯಾಗಿದೆ. ಇದಕ್ಕೆ 42 ವರ್ಷ ಪ್ರಾಯವಾಗಿದ್ದು, ಈ ಬಾರಿಯ ಗಜಪಡೆಯ ತಂಡದಲ್ಲಿದ್ದು, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದಿಂದ ಬಂದಿದೆ. 2.50ಮೀ. ಎತ್ತರ, 3.32ಮೀ ಉದ್ದ ಹಾಗೂ 3000-3220 ಕೆ.ಜಿ. ಭಾರವನ್ನು ಹೊಂದಿದೆ. ಇದನ್ನು 2009ರ ಫೆಬ್ರವರಿಯಲ್ಲಿ ಸೋಮವಾರಪೇಟೆಯ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಇದರ ನಿರ್ವಹಣೆಯ ಹೊಣೆಯನ್ನು  ಮಾವುತ ಜೆ.ಕೆ.ದೋಬಿ ಮತ್ತು ಕಾವಾಡಿ ರಂಜನ್ ಹೊತ್ತಿದ್ದಾರೆ.

ಪಟ್ಟದ ಅರಸ ವಿಕ್ರಮ ಮೈಸೂರು ದಸರಾ ಮಹೋತ್ಸವದಲ್ಲಿ ಕಳೆದ 16 ವರ್ಷಗಳಿಂದ ಭಾಗವಹಿಸುತ್ತಿದ್ದು, ಈಗ 40 ವರ್ಷ ವಯಸ್ಸು. ಸುಮಾರು 2.60 ಮೀ ಎತ್ತರ, 3.43 ಮೀ ಉದ್ದ, 3820 ಕೆಜಿ ತೂಕವನ್ನು ಹೊಂದಿರುವ ಈತನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಪಟ್ಟದ ಆನೆಯಾಗಿ ಅರಮನೆಯ ಪೂಜಾ ಕೈಂಕರ್ಯದ ಜವಬ್ದಾರಿ ಈ ಆನೆಯದ್ದಾಗಿದೆ. ದುಬಾರೆ ಆನೆ ಶಿಬಿರದಿಂದ ಬಂದಿರುವ ಇದನ್ನು ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ.

ಸಾಧು ಸ್ವಭಾವದ ಗೋಪಿಯನ್ನು 1993ರಲ್ಲಿ ಸೋಮವಾರಪೇಟೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾದ 38ವರ್ಷ ವಯಸ್ಸಿನ ಗೋಪಿ ತುಂಬಾ ಸಾಧು ಸ್ವಭಾವದವನಾಗಿದ್ದು, ದುಬಾರೆ ಆನೆ ಶಿಬಿರದಲ್ಲಿದ್ದು, ಸಫಾರಿ ಕೆಲಸ ನಿರ್ವಹಿಸಿದ ಅನುಭವವಿರುವ ಈತ ಕಳೆದ ಹತ್ತು  ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಈತ 2.92ಮೀ. ಎತ್ತರ, 3.42ಮೀ. ಎತ್ತರ, 3710 ಕೆ.ಜಿ. ತೂಕವಿದ್ದಾನೆ. ಈತನನ್ನು ಉಸ್ತುವಾರಿಯನ್ನು ಮಾವುತ ನಾಗರಾಜು, ಕಾವಾಡಿ ಶಿವು ವಹಿಸಿಕೊಂಡಿದ್ದಾರೆ.

ಗಜಪಡೆಯ ಹಿರಿಯಜ್ಜಿಯಾಗಿರುವ ವಿಜಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಪೈಕಿ ಹಿರಿಯ ವಯಸ್ಸಿನ ಆನೆಯಾಗಿದ್ದು, ಸದ್ಯ 61ವರ್ಷ ಪ್ರಾಯ.  ದುಬಾರೆ ಆನೆ ಶಿಬಿರದಲ್ಲಿರುವ ವಿಜಯಳನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 13 ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡ ಅನುಭವ ಹೊಂದಿದೆ. ಎತ್ತರ 2.29ಮೀಟರ್, ಶರೀರದ ಉದ್ದ 3.00ಮೀಟರ್, ಅಂದಾಜು ತೂಕ 3250ಕೆಜಿಯಷ್ಟಿದೆ. ತುಂಬಾ ಸಾಧು ಸ್ವಭಾವದ ಈಕೆಯನ್ನು  ಮಾವುತ ಭೋಜಪ್ಪ, ಕಾವಾಡಿ ಭರತ್ ನೋಡಿಕೊಳ್ಳುತ್ತಿದ್ದಾರೆ.

ಈ ಬಾರಿಯ ಮೈಸೂರು ದಸರಾದ ಜಂಬೂಸವಾರಿ ಜವಬ್ದಾರಿಯನ್ನು ಕೊಡಗಿನಿಂದ ಆಗಮಿಸಿದ ಗಜಪಡೆ ವಹಿಸಿಕೊಂಡಿದ್ದು ಯಶಸ್ವಿಯಾಗಿ ನೆರವೇರಿಸುವ ಸಲುವಾಗಿ ಕಠಿಣ ತಾಲೀಮಿನಲ್ಲಿ ತೊಡಗಿರುವ ದೃಶ್ಯ ಇದೀಗ ಕಂಡು ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು