ಮಂಗಳೂರು: ಆಗಸ್ಟ್ ತಿಂಗಳ ಶಿಬಿರವು ಮಂಗಳಾದೇವಿ ಸಮೀಪ ರಾಮಕೃಷ್ಣ ಮಠದಲ್ಲಿ ಮಠದ ಅಧ್ಯಕ್ಷರಾದ ಜಿತಕಾಮನಂದಜೀ ಮಹಾರಾಜ್ ಇವರಿಂದ ಆಗಸ್ಟ್ 01 ರಂದು ಉದ್ಘಾಟನೆಗೊಂಡಿತು. ತಮ್ಮ ಆಶೀರ್ವಚನದಲ್ಲಿ ಮನಸ್ಸು ಮತ್ತು ಯೋಗದ ಬಗ್ಗೆ ಮಾಹಿತಿ ತಿಳಿಸಿದರು.
ಯೋಗದ ಅಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸಾಮರಸ್ಯ ಸಾಧ್ಯವಾಗುತ್ತದೆ. ಆಸನಗಳು ದೈಹಿಕ ನೆಲೆಯಲ್ಲಿ ವರ್ತಿಸುವ ಮೂಲಕ ಮಾನಸಿಕ ಒತ್ತಡಗಳನ್ನು ಬಿಡುಗಡೆ ಮಾಡುತ್ತವೆ. ನಿಯಮಿತವಾದ ಯೋಗದ ಅಭ್ಯಾಸದಿಂದ ದೇಹಕ್ಕೆ ನವಚೈತನ್ಯ ಮತ್ತು ಶಕ್ತಿ ಲಭಿಸುತ್ತದೆ ಮನಸ್ಸು ಹಗುರುವಾಗುತ್ತದೆ, ಕ್ರಿಯಾಶೀಲವಾಗುತ್ತದೆ, ಉಲ್ಲಾಸಭರಿತಗೊಳ್ಳುತ್ತದೆ, ಜೊತೆಗೆ ಮನಸ್ಸು ಸಮತೋಲನದಲ್ಲಿರುತ್ತದೆ. ಮಾನವನ ಮಾನಸಿಕ ಸ್ವಾಸ್ಥ್ಯದಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ. ಇದು ನಮ್ಮ ಮನಸ್ಸನ್ನು ಸರಾಗಗೊಳಿಸುವ, ಶಾಂತಗೊಳಿಸುವ ಮತ್ತು ವಿಶ್ರಾಂತಿ ನೀಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಲೆಕ್ಕ ಪರಿಶೋಧಕರಾದ ಶ್ರೀಯುತ ಶಿವಕುಮಾರ್ ಕೆ. ಮಾತನಾಡಿ ಯೋಗದಿಂದ ಆರೋಗ್ಯ ರಕ್ಷಣೆ ಸಾಧ್ಯ, ದಿನಪೂರ್ತಿ ಉತ್ಸಾಹ, ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ, ಕಾಯಿಲೆಗಳು ನಿಯಂತ್ರಣವಾಗುತ್ತದೆ, ನಿಯಮಿತ ಯೋಗಾಭ್ಯಾಸವು ಮಾನಸಿಕ ಸ್ಪಷ್ಟತೆ ಮತ್ತು ಶಾಂತತೆಯನ್ನು ಸೃಷ್ಟಿಸುತ್ತದೆ, ದೇಹದ ಅರಿವನ್ನು ಹೆಚ್ಚಿಸುತ್ತದೆ, ದೀರ್ಘಕಾಲದ ಒತ್ತಡವನ್ನು ನಿವಾರಿಸುತ್ತದೆ, ಮನಸ್ಸನ್ನು ವಿಶ್ರಾಂತಿಯಿಂದ ಇರುವಂತೆ ಮಾಡುತ್ತದೆ, ಗಮನ ಮತ್ತು ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತದೆ ಎಂದು ತಿಳಿಸಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರಾರ್ಥಿಗಳಿಗೆ ಯೋಗದ ಮಾಹಿತಿ, ನಿಯಮಗಳನ್ನು ಹಾಗೂ ಮಂತ್ರ ಮುದ್ರೆಗಳ ಮಹತ್ವವನ್ನು ತಿಳಿಸಿದರು.
ಚಂದ್ರಹಾಸ ಬಾಳ ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾದ ಶ್ರೀ ಶಿವಕುಮಾರ್ ಕೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇಲಂಪಾಡಿ ಯೋಗ ಪ್ರತಿಷ್ಠಾನದ ಶಿಷ್ಯರಾದ ಸುಮಾ, ಭಾರತೀ ಎಸ್. ರಾವ್, ಚಂದ್ರಹಾಸ ಬಾಳ ಸಹಕರಿಸಿದರು. ಈ ಯೋಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಮಠವನ್ನು ಸಂಪರ್ಕಿಸುವಂತೆ ದೇಲಂಪಾಡಿ ಗೋಪಾಲಕೃಷ್ಣ ಮನವಿ ಮಾಡಿದ್ದಾರೆ. ಸುಮಾರು 50ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದರು.