ಮಂಗಳೂರು: ʻವಿಶ್ವ ಹೃದಯ ದಿನʼದ ಅಂಗವಾಗಿ ʻಕೆಎಂಸಿʼ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ (IMA) ಮಂಗಳೂರು ಶಾಖೆ, ರೋಟರಿ ಕ್ಲಬ್ ಇಂಟರ್ನ್ಯಾಷನಲ್ ಮತ್ತು ʻಕಾರ್ಡಿಯಾಲಜಿ ಸೊಸೈಟಿ ಆಫ್ ಮಂಗಳೂರುʼ ಇವರ ಸಹಯೋಗದೊಂದಿಗೆ ಸೆ.29ರಂದು ʻವಾಕಥಾನ್ʼ ಆಯೋಜಿಸಲಾಗಿದೆ.
ಬೆಳಗ್ಗೆ 6.30ಕ್ಕೆ ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ- ಇಲ್ಲಿಂದ ಪ್ರಾರಂಭವಾಗುವ ವಾಕಥಾನ್, ಬಲ್ಮಠ-ಹಂಪನಕಟ್ಟೆ ಜಂಕ್ಷನ್ ಮೂಲಕ ಐಎಂಎ ಹಾಲ್ ಮೂಲಕ ಸಾಗಿ ಕಪ್ರಿಗುಡ್ಡದ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಸಂಪನ್ನಗೊಳ್ಳಲಿದೆ.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಉನ್ನಿಕೃಷ್ಣನ್ ಬಿ ಅವರು ಮಾತನಾಡಿ, “ಹೃದ್ರೋಗಗಳು, ಅವುಗಳಿಗೆ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಒಂದು ತಿಂಗಳ ಸುದೀರ್ಘ ಅವಧಿಯ ಉಪಕ್ರಮದ ಭಾಗವಾಗಿ ಈ ವಾಕಥಾನ್ ಆಯೋಜನೆಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಹಿಲನ್ ಮತ್ತು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ಬಿ.ಪಿ.ದಿನೇಶ್ ಕುಮಾರ್ ಅವರು ʻವಾಕಥಾನ್ʼಗೆ ಚಾಲನೆ ನೀಡಲು ಸಮ್ಮತಿಸಿದ್ದಾರೆ. ʻಖೇಲೋ ಇಂಡಿಯಾʼದ ರಾಷ್ಟ್ರಮಟ್ಟದ ಅಥ್ಲೀಟ್ ಆಯುಷ್ ದೇವಾಡಿಗ ಸಾರಥಿಯಾಗಿ ಈ ʻವಾಕಥಾನ್ ʼಮುನ್ನಡೆಸಲಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಪೈ ಅವರು ಮಾತನಾಡಿ, “ಈ ವರ್ಷದ ವಿಶ್ವ ಹೃದಯ ದಿನವನ್ನು ʻಕ್ರಿಯಾಶೀಲರಾಗಿ ಹೃದಯವನ್ನು ಬಳಸಿ” ವಿಷಯಾಧಾರಿತವಾಗಿ (ಥೀಮ್) ಆಚರಿಸಲಾಗುತ್ತಿದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮತ್ತು ಅದಕ್ಕೆ ಆದ್ಯತೆ ನೀಡುವಂತೆ ಜನಸಾಮಾನ್ಯರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಮಂಗಳೂರಿನ ʻಕೆಎಂಸಿʼ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಹರೀಶ್ ಆರ್ ಅವರು ಮಾತನಾಡಿ, ಹೃದ್ರೋಗದ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ವಿಶೇಷವಾಗಿ ಯುವಕರಲ್ಲಿ ಹೃದ್ರೋಗ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯನ್ನು ನಾವು ನೋಡುತ್ತಿದ್ದೇವೆ. ಈ ಪ್ರವೃತ್ತಿಯನ್ನು ತಡೆಯಲು ಜಾಗೃತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳು ಮುಖ್ಯವಾಗಿವೆ. ಭವಿಷ್ಯದ ನಾಯಕರು ಮತ್ತು ಸಮಾಜದ ಉಸ್ತುವಾರಿಗಳಾಗಿ, ನಮ್ಮ ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಹೃದಯದ ಆರೋಗ್ಯದ ಮಹತ್ವವನ್ನು ಗುರುತಿಸುವುದು ಅತ್ಯಗತ್ಯ.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷರು ಮತ್ತು ವಲಯ 3, ಜಿಲ್ಲೆ 3181ರ ಸಹಾಯಕ ಗವರ್ನರ್ ರಂಜನ್ ಆರ್.ಕೆ ಅವರು ಮಾತನಾಡಿ, “ಹೃದಯರಕ್ತನಾಳದ ಕಾಯಿಲೆಗಳು ಭಾರತದಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ಆದರೆ ಜಾಗೃತಿ, ಮುನ್ನೆಚ್ಚರಿಕೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ನಾವು ಈ ಪ್ರವೃತ್ತಿಯನ್ನು ಎದುರಿಸಬಹುದು.
ʻಕೆಎಂಸಿʼ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ರಾಜೇಶ್ ಭಟ್ ಯು ಅವರು ಮಾತನಾಡಿ, “ನಮ್ಮ ಸಮುದಾಯದಲ್ಲಿ ಹೃದಯ ಆರೋಗ್ಯ ಜಾಗೃತಿಯನ್ನು ಬೆಳೆಸುವ ಅರ್ಥಪೂರ್ಣ ಹೆಜ್ಜೆ ಎನಿಸಿರುವ ಈ ʻವಾಕಥಾನ್ʼಗಾಗಿ ಮಂಗಳೂರಿನ ಕಾರ್ಡಿಯಾಲಜಿ ಸೊಸೈಟಿ ಜೊತೆ ಕೈಜೋಡಿಸುವುದು ಗೌರವದ ವಿಷಯವಾಗಿದೆ. ನಡಿಗೆಯಂತಹ ನಿಯಮಿತ ದೈಹಿಕ ಚಟುವಟಿಕೆಯು ನಮ್ಮ ಹೃದಯಗಳನ್ನು ಬಲಿಷ್ಠವಾಗಿರಿಸಲು ಸರಳ ಮತ್ತು ಶಕ್ತಿಯುತ ಮಾರ್ಗವಾಗಿದೆ. ಈ ಕಾರ್ಯಕ್ರಮದ ಮೂಲಕ, ಜನರನ್ನು ತಮ್ಮ ಹೃದಯ ಆರೋಗ್ಯದ ಜವಾಬ್ದಾರಿ ತೆಗೆದುಕೊಳ್ಳಲು ಪ್ರೇರೇಪಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಮನೀಶ್ ರೈ ಅವರು ಮಾತನಾಡಿ, ಹೃದಯ ಆರೋಗ್ಯ ಜಾಗೃತಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ವಾಕಥಾನ್ನಲ್ಲಿ ಭಾಗವಹಿಸುವವರು ಕೆಂಪು ಬಣ್ಣದ ಟೀಶರ್ಟ್ / ಟಾಪ್ ಧರಿಸಲು ಪ್ರೋತ್ಸಾಹಿಸಲಾಗುತ್ತದೆ. ಬೆಳಿಗ್ಗೆ 6:15ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ʻಕೆಎಂಸಿʼ ಆಸ್ಪತ್ರೆಯಲ್ಲಿ ಹಾಜರಿರಬೇಕು. ʻವಾಕಥಾನ್ʼನಲ್ಲಿ ಅತ್ಯುತ್ತಮ ಗುಂಪು / ಸಂಸ್ಥೆ ಭಾಗವಹಿಸುವಿಕೆ, ಅತ್ಯಂತ ಉತ್ಸಾಹಿ ಭಾಗಿದಾರರು, ಅತ್ಯುತ್ತಮ ಘೋಷಣೆ ಮತ್ತು ಅತ್ಯುತ್ತಮ ಫಲಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು.
ʻಅವತಾರ್ʼ ಹೋಟೆಲ್ ಸಹಯೋಗದೊಂದಿಗೆ ನಡೆದ ʻಕೋಲ್ಡ್ ಕುಕರಿʼ ಸ್ಪರ್ಧೆ, ʻರೀಲ್ʼ ತಯಾರಿಕೆ ಸ್ಪರ್ಧೆ ಮತ್ತು ʻಇ-ಪೋಸ್ಟರ್ʼ ಸ್ಪರ್ಧೆಯ ವಿಜೇತರನ್ನು ʻಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ʼ ಮೈದಾನದಲ್ಲಿ ನಡೆಯುವ ʻವಾಕಥಾನ್ʼ ಸಮಾರೋಪ ಸಮಾರಂಭದಲ್ಲಿ ಘೋಷಿಸಲಾಗುವುದು. ವಾಕಥಾನ್ ಆರಂಭದ ಸ್ಥಳದವರೆಗೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು,ʼʼ ಎಂದು ಮಾಹಿತಿ ನೀಡಿದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, “ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸುವಲ್ಲಿ ಮಂಗಳೂರಿನ ʻಕೆಎಂಸಿʼ ಆಸ್ಪತ್ರೆ ಸದಾ ಮುಂಚೂಣಿಯಲ್ಲಿದೆ.
ಕನ್ಸಲ್ಟಂಟ್ ಕಾರ್ಡಿಯೋ ಥೊರಾಸಿಕ್ ಸರ್ಜನ್ ಡಾ.ಮಾಧವ್ ಕಾಮತ್, ಹೃದಯ ಶಸ್ತ್ರಚಿಕಿತ್ಸಕ ಡಾ.ಈರೇಶ್ ಶೆಟ್ಟಿ, ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಪದ್ಮನಾಭ ಕಾಮತ್ ಮತ್ತು ಡಾ.ಎಂ.ಎನ್.ಭಟ್ ಈ ವೇಳೆ ಉಪಸ್ಥಿತರಿದ್ದರು.