ಮಂಗಳೂರು: ಮಂಗಳೂರಿನ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಶಾಲಾ ಪ್ರಾರ್ಥನೆಯಲ್ಲಿ ವಿದ್ಯಾಭಾರತಿಯ ರಾಜ್ಯಾಧ್ಯಕ್ಷರು ಮತ್ತು ಬೆಳಗಾವಿ ಸಂತಮೀರಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪರಮೇಶ್ವರ ಹೆಗಡೆ ಅವರು ಭಾಗವಹಿಸಿದರು.
ದೀಪವನ್ನು ಬೆಳಗಿಸಿದ ನಂತರ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, “ವಿದ್ಯಾಭಾರತಿಯ ಎಲ್ಲಾ ಶಾಲೆಗಳಲ್ಲಿ ದಿನದ ಆರಂಭದ ಪ್ರಾರ್ಥನೆಯನ್ನು ‘ಏಕ್‌ಸೂರ್’, ಅಂದರೆ ಇಡೀ ದೇಶದಲ್ಲಿ ಒಂದೇ ಸ್ವರದಲ್ಲಿ ಮಕ್ಕಳು ಹಾಡಿದಾಗ ಆ ದೈವಿಕ ಭಾವನೆ ಮತ್ತು ವಾತಾವರಣ ಶಾಲೆಯಲ್ಲಿ ತುಂಬಿಕೊಳ್ಳುತ್ತದೆ. ನಾವು ನಮ್ಮ ಶಾಲಾ ದಿನಗಳಲ್ಲಿ ಅಂಕ ಗಳಿಸುವ ಜೊತೆಗೆ ಬೇರೆ ಬೇರೆ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.
ಗೂಗಲ್‌ಗೆ ದಾಸರಾಗದೆ ಅಲ್ಲಿ ಸಿಗುವ ಉತ್ತಮ ಅಂಶಗಳನ್ನು ನಾವು ತಿಳಿದುಕೊಂಡು ಪ್ರಾಪಂಚಿಕ ಜ್ಞಾನವನ್ನು ಪಡೆಯಬೇಕು, ಶಾಲೆಗಳಲ್ಲಿರುವ ಗ್ರಂಥಾಲಯದ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ನಾವು ನಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಒಳ್ಳೆಯ ಪುಸ್ತಕವನ್ನು ಓದಬೇಕು.
ದಿನಕ್ಕೆ ೧೦ ಪುಟ ಓದಿದರೆ ವರ್ಷದಲ್ಲಿ ೩೬೫೦ ಪುಟಗಳಷ್ಟು ಪುಸ್ತಕವನ್ನು ಓದಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಅಭ್ಯಾಸವನ್ನು ಮಾಡಬೇಕು. ನಾವು ದೇಶದ ಉತ್ತಮ ನಾಗರೀಕರಾಗಲು ಶಾಲೆಯ ಎಲ್ಲಾ ವ್ಯವಸ್ಥೆಗಳನ್ನು ವಿನಿಯೋಗಿಸಿಕೊಳ್ಳಬೇಕು. ಡಾ.ಕೆ.ಸಿ.ನಾಯಕ್‌ರು ಒಂದು ಒಳ್ಳೆಯ ಮೂಲಭೂತ ಸೌಲಭ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುತ್ತಾರೆ. ಅವರ ಉದ್ದೇಶವಿರುವುದು ಇಲ್ಲಿ ಓದುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವುದೇ ಆಗಿರುತ್ತದೆ. ನಾವೆಲ್ಲರೂ ಇಲ್ಲಿ ಕಲಿಸುವ ಎಲ್ಲಾ ವಿಷಯಗಳಿಗೂ ಒತ್ತು ಕೊಟ್ಟು ಪಾಲನೆ ಮಾಡಿದಾಗ ಮಾತ್ರ ಇದು ಸಾಧ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಉಪಸ್ಥಿತರಿದ್ದರು. ಶಿಕ್ಷಕ ಶರಣಪ್ಪ ಸ್ವಾಗತಿಸಿ ವಂದಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಪ್ರಾರ್ಥನೆ ಮುಕ್ತಾಯವಾಯಿತು.
Ad