ಮಂಗಳೂರು: ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ಹಲವು ತಜ್ಞರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ 2017 ರಲ್ಲಿ ಅಂದಿನ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ವಿಷಯ ಸಮನ್ವಯತೆಗಾಗಿ ತಜ್ಞರ ಸಮಿತಿ ರಚಿಸಿ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ.
ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ.ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್.ವಿಘ್ನರಾಜ್ , ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ.
ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು -ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ.
ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆತಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಇನ್ನಷ್ಟು ಹೆಚ್ಚಿನ ಮಹತ್ವ ಬಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.