ಉಳ್ಳಾಲ: ನೇಪಾಳ ಮೂಲದ ಅಪ್ರಾಪ್ತೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೊಕ್ಕೊಟ್ಟು,ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ಇಂದು ಬೆಳಕಿಗೆ ಬಂದಿದೆ.
ನೇಪಾಳ ಮೂಲದ ರಬೀನ ಬಿ.ಕೆ (16)ಮೃತ ಅಪ್ರಾಪ್ತೆ.ತೊಕ್ಕೊಟ್ಟು ವೃಂದಾವನ ಹೊಟೇಲಿನ ಪಕ್ಕದಲ್ಲಿ ಫಾಸ್ಟ್ ಫುಡ್ ಕಮ್ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್ ಎಂಬವರು ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ತೊಕ್ಕೊಟ್ಟು, ಚೆಂಬುಗುಡ್ಡೆಯ ರೀಟಾ ಡಿ ಸೋಜ ಎಂಬವರ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದರು.ರಾಮ್ ಶರಣ್ ಅವರ ಎರಡನೇ ಮಗಳಾದ ರಬೀನ ನೇಪಾಳದಲ್ಲಿ ಎಂಟನೇ ತರಗತಿ ಓದುತ್ತಿದ್ದು,ಆಕೆಯನ್ನು ಮಂಗಳೂರಿನಲ್ಲೆ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆ ತಂದಿದ್ದರು.ಆದರೆ ರಬೀನ ತಾನು ನೇಪಾಳದಲ್ಲೇ ಓದು ಮುಂದುವರಿಸುವುದಾಗಿ ಹಠ ಹಿಡಿದಿದ್ದು ಈ ಬಗ್ಗೆ ಪೋಷಕರಲ್ಲಿ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ರಬೀನಳ ತಾಯಿ ರಮೀಲ ಅವರು ಚಿಕ್ಕ ಮಕ್ಕಳನ್ನ ಶಾಲೆಯಿಂದ ಮನೆಗೆ ಕರಕೊಂಡು ಹೋಗಿದ್ದ ವೇಳೆ ರಬೀನ ಮನೆಯ ಶೌಚಾಲಯದ ಕಬ್ಬಿಣದ ಸಲಾಕೆಗೆ ಚೂಡಿದಾರದ ಶಾಲಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ಉಳ್ಳಾಲ ಠಾಣಾ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಮೃತ ರಬೀನ ತಂದೆ,ತಾಯಿ,ಇಬ್ಬರು ಸಹೋದರಿಯರು ,ಓರ್ವ ಸಹೋದರನನ್ನು ಅಗಲಿದ್ದಾರೆ.