ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಸ್ಟೇಟ್ ಬ್ಯಾಂಕ್ ಸಮೀಪ ಪ್ರತ್ಯೇಕ ವಲಯ ನಿರ್ಮಾಣ ಮಾಡಲಾಗಿದೆ. ಗುರುತಿನ ಚೀಟಿ ವಿತರಿಸಿ ಸ್ಟಾಲ್‌ಹಂಚಿಕೆಯಾಗಿ ತಿಂಗಳು ಕಳೆದರೂ ವ್ಯಾಪಾರ ಆರಂಭಗೊಂಡಿಲ್ಲ. ನಿರ್ಮಾಣಗೊಂಡ ವಲಯ ಕುಡುಕರ, ಭಿಕ್ಷುಕರ ಅವಾಸ ತಾಣವಾಗಿ ಮಾರ್ಪಾಡಾಗುತ್ತಿದೆ. ಮಹಾನಗರದ ಜನರ ಆರೋಗ್ಯ ಮತ್ತು ಸ್ವಚ್ಛತೆಯ ಕಾರಣವನ್ನು ಮುಂದಿಟ್ಟು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ನಗರದಲ್ಲಿರುವ ಅಕ್ರಮ ಗೂಡಂಗಡಿಗಳನ್ನು ಕೆಡವಿದ್ದರು. ಅಧಿಕೃತ ವ್ಯಾಪಾರದ ಪರವಾನಿಗೆ ಪಡೆದವರಿಗೆ ವ್ಯಾಪಾರಿ ವಲಯ ಸ್ಥಾಪಿಸಿ ಅಲ್ಲಿ ಸ್ಟಾಲ್‌ಗೆ ಅವಕಾಶ ಕೊಡುವುದಾಗಿ ಹೇಳಲಾಗಿತ್ತು.
ಈಗ ವ್ಯಾಪಾರಿ ವಲಯ ಸಿದ್ಧವಾಗಿದ್ದರೂ ಅದಕ್ಕೆ ಸರಿಯಾದ ಮೂಲ ಸೌಕರ್ಯಗಳಿಲ್ಲ ಎಂಬ ದೂರಿದೆ. ಗೂಡಂಗಡಿ ಉರುಳಿಸುವ ಟೈಗರ್ ಕಾರ್ಯಾಚರಣೆಗೆ ವಹಿಸಿದಷ್ಟು ಆಸಕ್ತಿ ವಲಯ ಸೆ. 5ರಂದು ಪಾಲಿಕೆಯ ಮೂಲಕ ವ್ಯಾಪಾರಿಗಳಿಗೆ ಸ್ಟಾಲ್ ಹಸ್ತಾಂತರ ಕಾರ್ಯ ಮಾಡಲಾಗಿತ್ತು. 93 ವ್ಯಾಪಾರಿಗಳಿಗೆ ಚೀಟಿ ಎತ್ತುವ ಮೂಲಕ ಸ್ಟಾಲ್‌ಗಳನ್ನು ವಿತರಿಸಲಾಗಿತ್ತು. ಆದರೆ ಇಲ್ಲಿಯ ತನಕ ವಲಯದಲ್ಲಿ ವ್ಯಾಪಾರ ಆರಂಭಗೊಂಡಿಲ್ಲ. ಬೀದಿಬದಿ ವ್ಯಾಪಾರಿ ವಲಯ ನಿರ್ಮಾಣಗೊಂಡು ಬಹುತೇಕ ವರ್ಷ ಪೂರ್ಣಗೊಂಡಿದೆ. ಹಂತಹಂತವಾಗಿ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಮೇಲ್ಪಾವಣಿ, ನೆಲದ ಕೆಲಸ ಸೇರಿದಂತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅದರೂ ವ್ಯಾಪಾರ ಆರಂಭವಾಗದಿರುವುದು ಯಕ್ಷ ಪ್ರಶ್ನೆಯಾಗಿದೆ.
667 ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸುವ ಕೆಲಸ ಪಟ್ಟಣ ವ್ಯಾಪಾರಸ್ಥರ ಸಮಿತಿಯ ಮೂಲಕ ಈ ಹಿಂದೆಯೇ ನಡೆದಿತ್ತು. ಅವರಿಗೆ ವ್ಯಾಪಾರ ನಡೆಸಲು ಪಾಲಿಕೆ 18 ಷರತ್ತುಗಳನ್ನು ವಿಧಿಸಿದೆ. ಅವುಗಳನ್ನು ಪಾಲಿಸಿಕೊಂಡು ವ್ಯಾಪಾರಕ್ಕೆ ಮುಂದಾಗುವವರಿಗೆ ಗುರುತಿನ ಚೀಟಿ ನೀಡಿ ವ್ಯಾಪಾರಕ್ಕೆ ಅನುವು ಮಾಡಲಾಗುವುದು ಎಂದು ಪಾಲಿಕೆ ತಿಳಿಸಿದೆ , ಸ್ಟೇಟ್ ಬ್ಯಾಂಕ್ ಬಳಿ ನಿರ್ಮಿಸಿರುವ ವಲಯದಲ್ಲಿ ಪರಿಶಿಷ್ಟ ಜಾತಿಯವರಿಗೆ 22, ಪರಿಶಿಷ್ಟ ಪಂಗಡದವರಿಗೆ 8 ಹಾಗೂ ಅಂಗವಿಕಲರಿಗೆ 7 ಸ್ಟಾಲ್‌ಗಳು ಸೇರಿದಂತೆ 37 ಸ್ಟಾಲ್‌ಗಳನ್ನು ಕಾಯ್ದಿರಿಸಲಾಗಿದೆ. ಉಳಿದವುಗಳನ್ನು ಚೀಟಿ ಎತ್ತುವ ಮೂಲಕ ಸ್ಟಾಲ್‌ಗಳನ್ನು ಹಿಂದಿನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅವಧಿಯಲ್ಲಿ ವಿತರಿಸಲಾಗಿತ್ತು.
ಬೀದಿಬದಿ ವ್ಯಾಪಾರಿಗಳು ಹೇಳುವ ಪ್ರಕಾರ ಮೂಲ ಸೌಕರ್ಯ ಕೊರತೆಯನ್ನು ಬೊಟ್ಟು ಮಾಡುತ್ತಿದ್ದಾರೆ. ನೀರಿನ ವ್ಯವಸ್ಥೆ ಸೇರಿ ಕೆಲವೊಂದು ಸೌಕರ್ಯ ಆಗಬೇಕಿದೆ. ಅವುಗಳು ಪೂರ್ಣಗೊಂಡ ಬಳಿಕವಷ್ಟೇ ವ್ಯಾಪಾರ ಆರಂಭಿಸುತ್ತೇವೆ. ಒಂದೊಮ್ಮೆ ವ್ಯಾಪಾರ ಆರಂಭಿಸಿದರೆ ಮತ್ತೆ ಪಾಲಿಕೆ ವ್ಯವಸ್ಥೆ ಮಾಡುವುದಿಲ್ಲ ಎನ್ನು ಆತಂಕ ಇದೆ ಎನ್ನುತ್ತಾರೆ. ಅಧಿಕಾರಿಗಳ ಪ್ರಕಾರ ಕೇಳಿದ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ತತ್‌ಕ್ಷಣ ಆರಂಭಿಸಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.