Bengaluru 22°C
Ad

ಸುರತ್ಕಲ್ ಕಾಟಿಪಳ್ಳ ಮಸೀದಿಗೆ ಕಲ್ಲೆಸೆತ ಕೇಸ್: ಆರು ಮಂದಿ ಬಂಧನ

Kaatipalla

ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿರುವ ‘ಮಜ್ಜಿದುಲ್ಲಾ ಹುದಾಜುಮ್ಮಾ ಮಸೀದಿ’ಗೆ ಭಾನುವಾರ ರಾತ್ರಿ ಕಲ್ಲೆಸೆದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಎರಡು ಬೈಕು ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡಿದ್ದಾರೆ. ಸುರತ್ಕಲ್ ಕಾನ‌ಕಟ್ಲಿಯ ಆಶ್ರಯ ಕಾಲೊನಿ ನಿವಾಸಿ ಭರತ್ ಶೆಟ್ಟಿ (26 ವರ್ಷ), ಚೆನ್ನಪ್ಪ ಶಿವಾನಂದ ಚಲವಾದಿ ಮುತ್ತು (19 ), ಚೇಳಾಯ್ರು ಗ್ರಾಮದ ಖಂಡಿಗೆ ಪಾಡಿ ನಿವಾಸಿ ನಿತಿನ್ ಹಡಪ (22 ), ಮುಂಚೂರು ಗ್ರಾಮದ ಕೊಡಿಪಾಡಿ ನಿವಾಸಿ ಸುಜಿತ್ ಶೆಟ್ಟಿ (23), ಹೊಸಬೆಟ್ಟು ಗ್ರಾಮದ ಈಶ್ವರ ನಗರದ ಅಲ್ಪಪ್ಪ ಅಲಿಯಾಸ್ ಮನು (24) ಹಾಗೂ ಕಾಟಿಪಳ್ಳ ಮೂರನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ (34 ) ಬಂಧಿತರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ದೀಪಾಲಂಕಾರ ಮಾಡಿದ್ದ ಕಾರ್ಯಕರ್ತರು ಮಸೀದಿಯ ಒಳಗಡೆ ಕೆಲಸ ಮಾಡಿಕೊಂಡಿದ್ದರು. ರಾತ್ರಿ 9.50 ಗಂಟೆಯ ಸುಮಾರಿಗೆ ಜನತಾ ಕಾಲೋನಿಯ ಸ್ಮಶಾನದ ಕಡೆಯಿಂದ ಮಸೀದಿಯ ಹಿಂಭಾಗದ ರಸ್ತೆಯ ಕಡೆಗೆ ಎರಡು ಬೈಕ್‌ಗಳಲ್ಲಿ ಬಂದ ಕಿಡಿಗೇಡಿಗಳು ಮಸೀದಿಯ ಹಿಂಬದಿಯ ಕಿಟಕಿ ಗಾಜುಗಳಿಗೆ ಕಲ್ಲು ಬಿಸಾಡಿದ್ದರು. ಕಿಟಕಿ ಗಾಜುಗಳು ಹಾನಿಗೊಳಗಾಗಿದ್ದವು. ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ದ್ವೇಷವನ್ನು ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದೆ ಎಂದು ಆರೋಪಿಸಿ ಮಸೀದಿ ಅಧ್ಯಕ್ಷರಾದ ಕೆ.ಎಚ್.ಅಬ್ದುಲ್ ರಹಿಮಾನ್ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ‌ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಬಲೆ ಬೀಸಿದ ಪೊಲೀಸ್‌ ಟೀಂ ಕದ್ರಿ ಮಂಜುನಾಥ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು.

Ad
Ad
Nk Channel Final 21 09 2023