ಮಂಗಳೂರು: ತುಳುನಾಡಿನ ಜನರ ಆರಾಧ್ಯ ದೈವ ಕೊರಗಜ್ಜನ ಸನ್ನಿಧಿಗೆ ಸರಿಗಮಪ ಖ್ಯಾತಿಯ ಜಸ್ಕರನ್ ಸಿಂಗ್ ಭೇಟಿ ನೀಡಿದ್ದಾರೆ.. ಗಣೇಶ ಹಬ್ಬದ ದಿನದಂದು ಉಳ್ಳಾಲ ತಾಲೂಕಿನ ಕಲ್ಲಾಪಿನ ಬುರ್ದುಗೋಳಿ ಗುಳಿಗ- ಕೊರಗಜ್ಜ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಭೇಟಿ ನೀಡಿ ಜಸ್ಕರನ್ ಸಿಂಗ್ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣ ಪ್ರಣಯ ಸಖಿ’ ಚಿತ್ರದಲ್ಲಿ ‘ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ’ ಎಂಬ ಹಾಡಿನ ಮೂಲಕ ಯುವ ಮನಸ್ಸುಗಳನ್ನ ಸೆಳೆದಿದ್ದ ಜಸ್ಕರನ್ ಸಿಂಗ್ ಗೆ ಅವಕಾಶಗಳು ಹರಿದು ಬರುತ್ತಿದೆ..ಮಂಗಳೂರಿನ ಸರಿಪಳ್ಳದಲ್ಲಿ ಗಣೇಶೋತ್ಸವದ ಪ್ರಯುಕ್ತ ಕದ್ರಿ ಈವೆಂಟ್ ಆಯೋಜಿಸಿರುವ ಮ್ಯೂಸಿಕಲ್ ಪ್ರದರ್ಶನ ನೀಡಲು ಜಸ್ಕರನ್ ಸಿಂಗ್ ಮಂಗಳೂರಿಗೆ ಆಗಮಿಸಿದ್ದರು.
ಬುರ್ದು ಗೋಳಿಯ ಕೊರಗಜ್ಜ ಸಾನಿಧ್ಯಕ್ಕೆ ಭೇಟಿ ನೀಡಿದ ಜಸ್ಕರನ್ ಸಿಂಗ್ ಕೊರಗಜ್ಜನಿಗೆ ಪ್ರಿಯವಾದ ಬೀಡ ಚಕ್ಕುಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮತ್ತು ಬುರ್ದುಗೋಳಿಯ ಗುಳಿಗ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ವಿಭಿನ್ನವಾದ ದೈವಿಕ ಜಾಗೃತಿ ಉಂಟಾಗಿದೆ. ಮಂಗಳೂರಿನ ಕಾರ್ಯಕ್ರಮದ ಆಯೋಜಕರು ಬಹಳ ಪ್ರೀತಿಯಿಂದ ನನ್ನನ್ನು ಆಹ್ವಾನಿಸಿದ್ದು ಮಂಗಳೂರಿನ ಪ್ರದರ್ಶನದ ಯಶಸ್ಸಿಗೂ ದೈವ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ.
ಸ್ಯಾಂಡಲ್ ವುಡ್ ನಲ್ಲಿ ಹಾಡಲು ಸಾಕಷ್ಟು ಆಫರ್ ಗಳು ಬರುತ್ತಿವೆ.. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮತ್ತೊಂದು ಹಾಡನ್ನು ಹಾಡಲು ಅವಕಾಶ ನೀಡಿದ್ದು ಅದು ರೆಕಾರ್ಡ್ ಆಗುತ್ತಿದೆ. ತಮಿಳು ಚಿತ್ರದಲ್ಲೂ ಹಾಡಿಗೆ ಆಫರ್ ಗಳು ಬರುತ್ತಿದ್ದು ತಮಿಳು ಹಾಡುಗಳು ರೆಕಾರ್ಡ್ ಆಗುತ್ತಿದೆ ..ಪಂಜಾಬಿ ಚಿತ್ರ ಮತ್ತು ಸೋಲೋ ಆಲ್ಬಮ್ ಗಳಿಗಾಗಿ ಹಾಡುತ್ತಿದ್ದು ಅದರ ರೆಕಾರ್ಡಿಂಗ್ ಗಳು ಕೂಡ ನಡೆಯುತ್ತಿದೆ ಎಂದು ಹೇಳಿದರು.. ಬುರ್ದುಗೋಳಿ ಕ್ಷೇತ್ರದ ವತಿಯಿಂದ ಜಸ್ಕರನ್ ಸಿಂಗ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು..