ಮಂಗಳೂರು: ಸ್ವಸ್ತಿಕ್ ಕಲಾ ಕೇಂದ್ರ(ರಿ) ಜಲ್ಲಿಗುಡ್ಡೆ ಮಂಗಳೂರು ವತಿಯಿಂದ ವಿಂಶತಿ ವರ್ಷಾಚರಣೆ ಪ್ರಯುಕ್ತ ಸೆ. 29 ರಂದು ʼಬಾಬು ಕುಡ್ತಡ್ಕ ಪ್ರಶಸ್ತಿʼ ಗೌರವ ನಡೆಯಲಿದೆ.
ಯಕ್ಷರಂಗದ ಸವ್ಯಸಾಚಿ ಕಲಾವಿದರೆನಿಸಿದ್ದ ದಿ.ಬಾಬು ಕುಡ್ತಡ್ಕ ರವರ ಹೆಸರಿನಲ್ಲಿ ವರ್ಷಂಪ್ರತಿ ಜಲ್ಲಿಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾಕೇಂದ್ರ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವಿಂಶತಿ ವರ್ಷಾಚರಣೆ 2004 – 2024 ವತಿಯಿಂದ ನೀಡಲಾಗುತ್ತಿರುವ 2024-25 ರ ಸಾಲಿನ ಬಾಬು ಕುಡ್ತಡ್ಕ ಪ್ರಶಸ್ತಿ ಗಾಗಿ ತೆಂಕು ಬಡಗು ತಿಟ್ಟು ಎರಡು ಪ್ರಕಾರಗಳಲ್ಲೂ ಖ್ಯಾತನಾಮರೆನಿಸಿದ ಎಂ.ಕೆ. ರಮೇಶ್ ಆಚಾರ್ಯ ಅವರನ್ನು ಸ್ವಸ್ತಿಕ್ ಆಯ್ಕೆ ಸಮಿತಿಯ ಮೂಲಕ ಪ್ರಶಸ್ತಿಗಾಗಿ ಆಯ್ಕೆಗೊಳಿಸಲಾಗಿದೆ.
ಮಂಗಳೂರು ಪುರಭವನದಲ್ಲಿ ಸೆಪ್ಟಂಬರ್ 29 ನೇ ರವಿವಾರ ನಡೆಯಲಿರುವ ಈ ಪ್ರಶಸ್ತಿ ಸಮಾರಂಭ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದ್ದಾರೆ.
ಎಂ.ಕೆ. ರಮೇಶ್ ಆಚಾರ್ಯ ಅವರ ಪರಿಚಯ:
ಮಲೆನಾಡು ಕಂಡ ಪ್ರತಿಭಾಶಾಲಿ,ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯರು. ಉಭಯ ತಿಟ್ಟುಗಳ ಸಮರ್ಥ ಸ್ತ್ರೀ ವೇಷ ದಾರಿ.
ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿದ ಪಟು. ವೃತ್ತಿ ಕಲಾವಿದರಾಗಿ ಐವತ್ತು ವರ್ಷಗಳ ಸಾರ್ಥಕ ಸೇವೆ. ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ, ಮೂವತ್ತೈದಕ್ಕೂ ಹೆಚ್ಚು ಕಾಲ್ಪನಿಕ ಪ್ರಸಂಗಗಳಿಗೆ ಪದ್ಯ ರಚನೆಕಾರರು,ಅನೇಕ ಪುರಾಣ ಪ್ರಸಂಗಗಳನ್ನು ಯಕ್ಷರಂಗಕ್ಕೆ ನೀಡಿರುವುದಲ್ಲದೆ, ಶೇಣಿ- ಸಾಮಗರಂತಹ ಯಕ್ಷ ದಿಗ್ಗಜರೊಂದಿಗೆ,ದ್ರೌಪದಿ, ಚಂದ್ರಮತಿ,ಶಾಂತಲೆ, ಮೇನಕ, ಕಯಾದು, ಸೈರಂದ್ರಿ,ಸೀತೆ,ರುಕ್ಮಿಣಿ ಮುಂತಾದ ಪಾತ್ರಗಳಿಗೆ ಜೀವ ತುಂಬಿ ಯಕ್ಷರಂಗದ ಚೌಕಟ್ಟಿನಲ್ಲಿ ಪರಂಪರಾಗತ ಪಾತ್ರದಿಂದ , ನವಿರಾದ ಮಾತುಗಳಿಂದ ಜನಮಾನಸದಲ್ಲಿ ನೆಲೆನಿಂತ ಪ್ರಬುದ್ದ ಕಲಾವಿದ. ಮಂದಾರ್ತಿ,ಧರ್ಮಸ್ಥಳ,ಸುರತ್ಕಲ್,ಸೌಕೂರು,ಪೆರ್ಡೂರು,ಸಾಲಿಗ್ರಾಮ ಮೇಳಗಳಲ್ಲಿ ದುಡಿದ ಇವರ ಅದ್ವಿತೀಯ ಯಕ್ಷಸೇವೆಯನ್ನು ಗುರುತಿಸಿ ಸ್ವಸ್ತಿಕ್ ಕಲಾಕೇಂದ್ರ ಈ ಪ್ರಶಸ್ತಿ ನೀಡಲಿದೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಗೌರವ ಫಲಕ, ಪ್ರಶಸ್ತಿ ಪತ್ರ ಅಲ್ಲದೆ ಸ್ಮರಣಿಕೆಯನ್ನೊಳಗೊಂಡಿರುತ್ತದೆ.
ಇನ್ನು ಸೆ. 29 ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಚಂದ್ರಶೇಖರ್ ಕರ್ಕೇರಾ ರಚಿಸಿದ “ಎಂಚಿತ್ತಿನಾಯೆ ಎಂಚಾಯೆ” ಎಂಬ ಹಿಂದಿನ ಶೈಲಿಯ ಪರದೆ ನಾಟಕ ನಡೆಯಲಿದ್ದು ಹಿರಿಯ ಕಲಾವಿದ ವಸಂತ್ ವಿ. ಅಮೀನ್ ನಿರ್ದೇಶಿಸಿದ್ದಾರೆ. ತುಳುವ ಮಾಣಿನ್ಯ ಅರವಿಂದ್ ಬೋಳಾರ್ ಇವರು ಸಂಪೂರ್ಣ ಸಹಕಾರ ನೀಡಲಿದ್ದಾರೆ.