ಬಂಟ್ವಾಳ: ಪೊಳಲಿಯ (ಅಡ್ಡೂರು) ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಯಲ್ಲಿ ಘನವಾಹನ ಸಂಚಾರದ ಕುರಿತಂತೆ ಎರಡು ತಿಂಗಳುಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಮತ್ತು ಪರ್ಯಾಯ ರಸ್ತೆಯ ವ್ಯವಸ್ಥೆಗೆ ಮುಂದಾಗದೆ ನಿರ್ಲಕ್ಷ್ಯತನ ತೋರಿದ ಜಿಲ್ಲಾಡಳಿತದ ವಿರುದ್ದ ಜನಾಕ್ರೋಶ ವ್ಯಕ್ತವಾದ ಬೆನ್ನಲೇ ಎಚ್ಚೆತ್ತ ಜಿಲ್ಲಾಡಳಿತ ಬಂಟ್ವಾಳ ತಹಶೀಲ್ದಾರರ ನೇತೃತ್ವದ ಅಧಿಕಾರಿಗಳ ದಂಡು ಸೋಮವಾರ ಪೊಳಲಿಗೆ ರವಾನಿಸಿ ಗ್ರಾಮಸ್ಥರ ಮನವೊಲಿಸಿದ್ದು,ಕೊನೆಗೂ ಮಂಗಳವಾರ ( ಅ.15) ನಡೆಯಬೇಕಾಗಿದ್ದ ಪ್ರತಿಭಟನೆಯನ್ನು ಹಿಂತೆಗೆಸುವಲ್ಲಿ ಯಶಸ್ವಿಯಾಗಿದೆ.
ಬಂಟ್ವಾಳ ತಹಶೀಲ್ದಾರ್ ಡಿ. ಅರ್ಚನ್ ಭಟ್, ಲೋಕೋಪಯೋಗಿ ಇಲಾಖಾಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಂದಾನ ಮಾತುಕತೆ ನಡೆಸಿದರು. ಪರ್ಯಾಯ ರಸ್ತೆ ವ್ಯವಸ್ಥೆಯ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಹಾಗೂ ತಾಲೂಕಿನ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಹಾಗೆಯೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲು ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಅರ್ಚನಾ ಭಟ್ ಅವರು ಹೋರಾಟ ಸಮಿತಿಮತ್ತು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು.
ಶಾಸಕರ ಭರವಸೆ: ಪ್ರತಿಭಟನೆ ಹಿಂತೆಗೆತ: ಹೋರಾಟ ಸಮಿತಿ ಹಾಗೂ ಗ್ರಾಮಸ್ಥರು ಇದಕ್ಕೆ ಒಪ್ಪುವ ಸ್ಥಿತಿಯಲ್ಲಿರಲಿಲ್ಲ, ಶಾಸಕರು ಸೂಕ್ತ ಭರವಸೆಯಿತ್ತರೆ ಮಾತ್ರ ನಾವು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಸಮಿತಿ ಮುಖಂಡರು ಪಟ್ಟುಹಿಡಿದರು.ಕೊನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಅಗಮಿಸಿ ಇಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಮಾಡಿಕೊಡುವ ಭರವಸೆ ನೀಡಿದರಲ್ಲದೆ ತಾತ್ಕಾಲಿಕ ರಸ್ತೆಯ ನಿರ್ಮಾಣಕ್ಕು ಜಾಗವನ್ನು ಗುರುತಿಸಲಾಗಿದೆ ಎಂದು ಹೋರಾಟ ಸಮಿತಿ ಮುಖಂಡರುಹಾಗೂ ಗ್ರಾಮಸ್ಥರಿಗೆ ತಿಳಿಸಿದ ಹಿನ್ನಲೆಯಲ್ಲಿ ಮಂಗಳವಾರ ಪೊಳಲಿ ಸ್ವಯಂಪ್ರೇರಿತ ಬಂದ್ ಹಾಗೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಪ್ರಮುಖರು ಘೋಷಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೋರಾಟ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ್ ನಾವುಡ ಪೊಳಲಿ, ಜಯರಾಮ್ ಕೃಷ್ಣ ಪೊಳಲಿ, ಅಬೂಬಕ್ಕರ್ ಅಮ್ಮುಂಜೆ , ಕಿಶೋರ್ ಪಲ್ಲಿಪಾಡಿ, ಲೋಕೇಶ್ ಪೊಳಲಿ, ಯು.ಪಿ.ಇಬ್ರಾಹಿಂ, ಚಂದ್ರಹಾಸ್ ಪಲ್ಲಿಪಾಡಿ, ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದರು.
ಕಳೆದ ಎರಡು ತಿಂಗಳಿನಿಂದ ಪೊಳಲಿ ಸೇತುವೆಯಲ್ಲಿ ಬಸ್ ಸಹಿತ ಘನ ವಾಹನ ಸಂಚಾರ ನಿರ್ಬಂಧಿಸಿದರಿಂದ ಪೊಳಲಿ ಹಾಗೂ ಅಸುಪಾಸಿನ ನಾಗರಿಕರು ತೊಂದರೆ ಅನುಭವಿಸುತ್ತಿದ್ದು,ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತ ಸಹಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ತಾಳಿದ್ದರು.ಇದರಿಂದ ಸಹನೆಯಕಟ್ಟೆಯೊಡದ ಗ್ರಾಮಸ್ಥರು ಮಂಗಳವಾರ ಸ್ವಯಂಪ್ರೇರಿತ ಬಂದ್ ಸಹಿತ ಪ್ರತಿಭಟನೆ ಆಯೋಜಿಸಿದ್ದರು.ಇದರಿಂದ ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ ಬಂಟ್ವಾಳ ತಾಲೂಕು ಅದ್ಇಕಾರಿಗಳನ್ನು ಕಳಿಸಿಕೊಟ್ಟು ಸಂದಾನ ನಡೆಸಿದೆ. ಸದ್ಯ ಪರ್ಯಾಯ ರಸ್ತೆ ವ್ಯವಸ್ಥೆಗೆ ವಾರದ ಗಡುವು ನೀಡಿರುವ ಹೋರಾಟ ಸಮಿತಿಮತ್ತು ಗ್ರಾಮಸ್ಥರು ಈ ಅವಧಿಯೊಳಗೆ ವ್ಯವಸ್ಥೆಯಾಗದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.