ಮಂಗಳೂರು: ಪ್ರಜಾಪ್ರಭುತ್ವ ದೇಶದ ಜನಗಳು ಜಾಗೃತ ಪ್ರಜೆಗಳಾಗಬೇಕು. ಒಂದು ವೇಳೆ ಜಾಗೃತ ಪ್ರಜೆಗಳಾಗದೇ, ಜನರಾಗಿಯೇ ಉಳಿದುಕೊಂಡರೆ ಎಷ್ಟೇ ವರ್ಷ ಕಳೆದರೂ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಅಭಿಪ್ರಾಯಿಸಿದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಓ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ‘ಬದಲಾವಣೆಯ ಚಿಂತನೆಯನ್ನು ಮರು ಪರಿಶೀಲಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿಶ್ವ ಯುದ್ಧದ ಸಮಯದಲ್ಲಿ ಜಪಾನ್ ದೇಶದ ಮೇಲೆ ಅಣು ಬಾಂಬ್ ದಾಳಿಯಾಗಿದ್ದರೂ ಆ ದೇಶ ಇಂದು ಮುಂದುವರಿದಿದೆ. ಅದಕ್ಕೆ ಕಾರಣ ಅಲ್ಲಿನ ಜಾಗೃತ ಪ್ರಜೆಗಳು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ನಮ್ಮ ದೇಶದಲ್ಲಿ ಜನಗಳ ಸಂಖ್ಯೆ ಜಾಸ್ತಿ ಇದೆಯೇ ಹೊರತು ಜಾಗೃತ ಪ್ರಜೆಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ, ನಾವು ಜಾಗೃತ ಪ್ರಜೆಗಳಾಗುವ ಮೂಲಕ ಈ ದೇಶವನ್ನು ಕಟ್ಟಬೇಕಿದೆ. ಅದಕ್ಕಾಗಿ ಈ ದೇಶದ ಜನ ಜಾತಿ, ಭೇದ, ಧರ್ಮಗಳನ್ನು ಬಳಸಿಕೊಂಡು ಮಾಡುತ್ತಿರುವ ರಾಜಕೀಯವನ್ನು ದೂರ ಇಡಬೇಕು ಎಂದು ಕರೆ ನೀಡಿದರು.
ದೇಶದ ಯುವ ಜನತೆಯ ಮನಸ್ಸಿನಲ್ಲಿ ದ್ವೇಷ, ಅಸೂಯೆ, ಮಾದಕ ದ್ರವ್ಯ ಎಂಬ ತುಪ್ಪವನ್ನು ಸುರಿಯಲಾಗುತ್ತಿದೆ. ಇದರಿಂದಾಗಿ ಅವರ ಭವಿಷ್ಯವನ್ನು ಕತ್ತಲಿಗೆ ದೂಡಲಾಗುತ್ತಿದೆ. ಇದನ್ನು ತಡೆಯಬೇಕಾದದ್ದು ಸಮಾಜದ ಜವಾಬ್ದಾರಿ. ಹಾಗಾಗಿ, ಯುವಜನತೆಯ ಮನಸ್ಸಿನಲ್ಲಿ ಪ್ರೀತಿ ಹಂಚುವ ಸಮಾಜ ಪ್ರೇಮ, ಮನುಷ್ಯ ಪ್ರೇಮ, ಆರೋಗ್ಯದ ಗುಟ್ಟುಗಳನ್ನು ಬಿತ್ತಬೇಕಾಗಿದೆ. ಆ ಮೂಲಕ ಸಮಾಜದ ಬದಲಾವಣೆಯ ಹರಿಕಾರನಾಗಲು ಪ್ರೇರಣೆ ನೀಡುವ ಅಗತ್ಯ ಇಂದು ಒದಗಿಬಂದಿದೆ ಎಂದು ನಿಕೇತ್ ರಾಜ್ ಮೌರ್ಯ ತಿಳಿಸಿದರು.
ಜಮಾಅತೆ ಇಸ್ಲಾಮೀ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ದ್ವೇಷ, ಹಗೆತನಗಳಿಂದ ಮನುಷ್ಯರ ಮನಸ್ಸು ಇಂದು ಮಲಿನವಾಗುತ್ತಿದೆ. ಮನುಷ್ಯ ಅಧರ್ಮಿಯಾದರೆ ಆತ ಪಿಶಾಚಿಯಾಗುತ್ತಾನೆ. ಹಾಗಾಗಿಯೇ ಸಮಾಜದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ, ದರೋಡೆ ಹೆಚ್ಚಾಗುತ್ತಿದೆ. ಮನುಷ್ಯ ಪೈಶಾಚಿಕತೆಯ ಕಡೆಗೆ ಹೋಗುತ್ತಿರುವ ಕಾರಣ ಏನು ಎನ್ನುವುದನ್ನು ಸಮಾಜದ ವಿಶ್ಲೇಷಣೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ. ಸತ್ಯ, ಧರ್ಮ, ಸಹನೆ, ಪ್ರೀತಿ ಇಂದು ಸಮಾಜಕ್ಕೆ ಅಪರಿಚಿತವಾಗುತ್ತಾ ಬಂದಿದೆ. ಇಂತಹ ಮಾನವೀಯ ಮೌಲ್ಯಗಳನ್ನು ಬಲಪಡಿಸಬೇಕಾದ ಬಹಳ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ.
“ಸಮಾಜದಲ್ಲಿ ಹಲವಾರು ಫೋಬಿಯಾಗಳಿವೆ. ಅದೇ ರೀತಿ ಇಸ್ಲಾಮೋಫೋಬಿಯಾವನ್ನು ಜಗತ್ತಿನಲ್ಲಿ ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಮುಸ್ಲಿಮರ ಬಗ್ಗೆ, ಇಸ್ಲಾಂ ಧರ್ಮದ ಬಗ್ಗೆ ತಪ್ಪು ಮಾಹಿತಿಗಳನ್ನು ಹಂಚುತ್ತಾ, ಸಮಾಜದಲ್ಲಿ ದ್ವೇಷ ಬಿತ್ತಿ, ಭಯ ಹರಡಿಸಲಾಗುತ್ತಿದೆ. ಇಸ್ಲಾಮಿನ ಬಗ್ಗೆ ಹರಡಲಾಗುತ್ತಿರುವ ಭಯವನ್ನು ಹೋಗಲಾಡಿಸಬೇಕಾದ ಬಹಳ ದೊಡ್ಡ ಜವಾಬ್ದಾರಿ ಮುಸ್ಲಿಂ ಸಮುದಾಯದ ಯುವಕರದ್ದಾಗಿದೆ” ಎಂದು ಮುಹಮ್ಮದ್ ಕುಂಞಿ ಕರೆ ನೀಡಿದರು.
ಎಸ್‌ಐಓ ರಾಷ್ಟ್ರೀಯ ಕಾರ್ಯದರ್ಶಿ ಅಡ್ವೊಕೇಟ್ ಅನೀಸ್ ರಹ್ಮಾನ್ ಉದ್ಘಾಟನಾ ಭಾಷಣಗೈದರು. ಜಮಾಅತೆ ಇಸ್ಲಾಮೀ ಹಿಂದ್ ಕೇರಳ ಮುಖಂಡರಾದ ಸಲೀಂ ಮಂಬಾಡ್ ಸಮಾರೋಪ ನುಡಿಗಳನ್ನಾಡಿದರು. ಎಸ್‌ಐಓ ಕರ್ನಾಟಕ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಜಿಐಓ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಝಿನೇರಾ ಹುಸೇನ್, ಜಮಾಅತೆ ಇಸ್ಲಾಮೀ ಹಿಂದ್ ಕೇರಳ ಉಪಾಧ್ಯಕ್ಷ ವಿ.ಟಿ.ಅಬ್ದುಲ್ಲಾ ಕೋಯ ತಂಙಳ್ ಮಾತನಾಡಿದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ರಮೀಝ್ ಇ.ಕೆ. ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ವೇದಿಕೆಯಲ್ಲಿ ಎಸ್‌ಐಓ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಆಸಿಫ್ ಡಿ ಕೆ, ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ, ಮೌಲಾನಾ ಯಹ್ಯಾ ತಂಙಳ್ ಮದನಿ, ಅಬ್ದುಲ್ ಕರೀಂ ಉಳ್ಳಾಲ್, ಎಸ್‌ಐಓ ರಾಜ್ಯ ಘಟಕದ ಪದಾಧಿಕಾರಿಗಳಾದ ಮುಝಾಹಿರ್ ಕುದ್ರೋಳಿ, ಅಫ್ವಾನ್ ಹೂಡೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.