Bengaluru 28°C
Ad

ಹಿಂದಿ ಭಾಷೆ ಮೇಲೆ ದಬ್ಬಾಳಿಕೆ ಸರಿಯಲ್ಲ: ಯು.ಟಿ. ಫರ್ಜಾನ

ಹಿಂದಿ ಭಾಷೆ ಮೇಲೆ ದಬ್ಬಾಳಿಕೆ ಸರಿಯಲ್ಲ: ಯು.ಟಿ. ಫರ್ಜಾನ

ಮಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾರವರು ತಂಡಗಳನ್ನು ರಚಿಸಿ 2047ರೊಳಗೆ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡುವ ಪರಿಕಲ್ಪನೆ ಒಕ್ಕೂಟ ವ್ಯವಸ್ಥೆಯ ಮೇಲಿನ ಹಲ್ಲೆಯಾಗಿದ್ದು, ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಈ ಬಗ್ಗೆ ಜನಜಾಗೃತಿಯಾಗಬೇಕಿದೆ ಎಂದು ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಜಾನ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿ ಭಾಷೆ ಮೇಲೆ ನಮಗೆ ಅಭಿಮಾನವಿದೆ. ಆದರೆ ಅದರ ಹೇರಿಕೆ ಸರಿಯಲ್ಲ. ಭಾಷಾವಾರು ಏಕೀಕರಣದ ವೇಳೆ ತಮಿಳುನಾಡಿನಲ್ಲಿ ತಮಿಳರು, ಆಂಧ್ರದಲ್ಲಿ ತೆಲುಗಿನವರು ಒಂದಾದರು. ಆದರೆ ಕಳೆದ 75 ವರ್ಷಗಳಲ್ಲಿ ಕರ್ನಾಟಕದಲ್ಲಿ ಏಕೀಕರಣಕ್ಕೆ ಇನ್ನೂ ನಾವು ಕಷ್ಟ ಪಡುತ್ತಿರುವಾಗ ಹಿಂದಿ ದಬ್ಬಾಳಿಕೆ ಸರಿಯಲ್ಲ. ಈ ಬಗ್ಗೆ ವ್ಯಾಪಕ ಅರಿವು ಮೂಡಬೇಕೆಂಬುದು ನನ್ನ ಕಳಕಳಿ ಎಂದವರು ಹೇಳಿದರು.

ದೇಶಪ್ರೇಮದ ಚೌಕಟ್ಟಿನಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇಳಲಾಗುತ್ತದೆ. ಆದರೆ ಉಳಿದ ಭಾಷೆಯ ಜನರು ದ್ವಿತೀಯ ದರ್ಜೆಯ ಪ್ರಜೆಗಳಾಗುತ್ತಾರೆ. ಇದಲ್ಲದೆ ದಕ್ಷಿಣದ ರಾಜ್ಯಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಸಾಧಿಸಿವೆ. ವಲಸೆ ನಡೆಯುತ್ತಿರುವುದು ಬದುಕಾಗಿ ಉತ್ತರದಿಂದ ದಕ್ಷಿಣಕ್ಕೆ ವಲಸೆ ನಡೆಯುತ್ತಿದೆ.

ನಮ್ಮ ನೆಲ, ಜಲ, ಕೈಗಾರಿಕೆಗಳಲ್ಲಿ ಅವರಿಗೆ ಉದ್ಯೋಗ ನೀಡಲು ನಾವು ಅವರ ಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆ ಅವರು ನಮ್ಮ ದಕ್ಷಿಣ ಭಾರತದ ಯಾವುದೇ ಭಾಷೆಗಳನ್ನು ಕಲಿಯುವುದಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಉತ್ತರ ಭಾರತದಿಂದ ಅನಿಯಂತ್ರಿತ ವಲಸೆ ಹೆಚ್ಚುತ್ತಿದೆ. ಯಾವುದೇ ರೀತಿಯ ಕೆಲಸಕ್ಕೆ ಇಲ್ಲಿ ಜನ ಸಿಗುವುದಿಲ್ಲ ಎಂಬ ಮೂದಲಿಕೆಯ ಮಾತುಗಳನ್ನು ನಾವು ಕೇಳುವಂತಾಗಿದೆ. ಹಂಪಿ, ಬೇಲೂರು ಮೊದಲಾದ ಶಿಲ್ಪಮಯ ಕಟ್ಟಡಗಳನ್ನು ಕಟ್ಟಿರುವುದು ಕನ್ನಡ ಜನರಲ್ಲವೇ.

ಜನಸಂಖ್ಯಾ ಸ್ಪೋಟ ನಿಯಂತ್ರಣದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಮುಂದೆ ಲೋಕಸಭಾ ಪ್ರಾಂತ್ಯಗಳ ವಿಂಗಡನೆಯ ಸಂದರ್ಭದಲ್ಲೂ ಮತ್ತೆ ರಾಜಕೀಯ ಅಧಿಕಾರ ಉತ್ತರ ಭಾರತದವರಿಗೆ ಲಭ್ಯವಾಗಿ ದಕ್ಷಿಣದ ರಾಜ್ಯಗಳು ಅಂಗವೈಕಲ್ಯ ಅನುಭವಿಸಬೇಕಾದ ಪರಿಸ್ಥಿತಿ ಇದ್ದು ಇದು ಗಂಭೀರವಾದ ವಿಚಾರ ಎಂದವರು ಹೇಳಿದರು.

ಇಂತಹ ಸಂದರ್ಭದಲ್ಲಿ ದೇಶದ ಸಮಗ್ರತೆಯ ಬಗ್ಗೆ ಚಿಂತನೆ ಉಳ್ಳ ನಾಡಿನ ಪ್ರಜ್ಞಾವಂತ ಜನರು ಪಕ್ಷಾತೀತವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಪ್ರತಿರೋಧ ಮಾಡದಿದ್ದರೆ ಉಳಿಗಾಲವಿಲ್ಲ. ಕೆನಡಾದಲ್ಲಿ ಪಂಜಾಬ್ ಆಡಳಿತ ಭಾಷೆಯಿದೆ. ಸಿಂಗಾಪುರ, ಶ್ರೀಲಂಕಾದಲ್ಲಿಯೂ ತಮಿಳು ಆಡಳಿತ ಭಾಷೆಯಿದೆ.

ಕರ್ನಾಟಕದಲ್ಲಿ 7 ಕೋಟಿ ಜನಸಂಖ್ಯೆ ಇರುವ ರಾಜ್ಯ ತಲಾವಾರು ಜಿಎಸ್‌ಟಿ, ವಿದೇಶಿ ರಫ್ತುವಿನಲ್ಲೂ ಕರ್ನಾಟಕ ಮುಂಚೂಣಿಯಲ್ಲಿದ್ದೇವೆ. ಸರಕು ಮತ್ತು ಸಾಗಣಿಕೆಯಲ್ಲಿ ನಾಲ್ಕನೇ ಸ್ಥಾನ, ಸೇವಾ ತೆರಿಗೆಯಲ್ಲಿ ನಾವು ಮೊದಲಿಗರು. ಇಷ್ಟೆಲ್ಲಾ ದೇಶಕ್ಕೆ ಕೊಡುಗೆ ನೀಡುತ್ತಿರುವ ನಾವು ಎರಡನೆ ದರ್ಜೆಯ ಪ್ರಜೆಗಾಳಾಗಿ ಬಾಳಬೇಕೆಂಬ ಬಗ್ಗೆ ನಮ್ಮ ಕನ್ನಡತನ ಎಚ್ಚರಗೊಳ್ಳಬೇಕಾಗಿದೆ ಎಂದವರು ಹೇಳಿದರು.

ಗೋಷ್ಟಿಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಮಾಜಿ ಸಂಸದ ಬಿ. ಇಬ್ರಾಹಿಂ, ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಕೆ. ಅಪ್ಪಿ ರೂಪ ಪೂಜಾರಿ, ಚಂದ್ರಕಲಾ ಜೋಗಿ, ತನ್ನೀರ್ ಶಾ, ಕವಿತಾ ವಾಸು, ಸಬಿತಾ ಮಿಸ್ಕಿತ್, ಲಕ್ಷ್ಮಿನಾಯರ್, ನಝೀರ್ ಬಜಾಲ್, ಸಬೀರ್ ಎಸ್. ಮೊದಲಾದವರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023