ಮಂಗಳೂರು: ನಡುರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣ ಸಂಬಂಧ ಸೂಕ್ತ ಕ್ರಮ ಜರುಗಿಸುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಇಂದು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದರು.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಿಪಲ್ಲ ಅವರು, ನಮಾಜ್ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ನಮಾಜ್‌ಗೆ ಪ್ರತ್ಯುತ್ತರವಾಗಿ ಅದೇ ಜಾಗದಲ್ಲಿ ಅದೇ ಸಮಯದಲ್ಲಿ ಶಂಖ ಜಾಗಟೆಗಳೊಂದಿಗೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕ ಸ್ಥಳದಲ್ಲಿ ಅದೂ ವಾಹನಗಳು ಓಡಾಡುವ ಮುಖ್ಯರಸ್ತೆಯಲ್ಲಿ ಉದ್ದೇಶ ಪೂರ್ವಕವಾಗಿ ನಮಾಜ್ ಮಾಡಿ ಸಮಾಜದ ಶಾಂತಿಯನ್ನ ಕದಡುವ ಕೆಲಸ ನಡೆಸುತ್ತಿದ್ದಾರೆ. ಕೆಲವರು ಕೋಮು ಗಲಭೆ ಸೃಷ್ಟಿಸಲೆಂದೇ ಇಂತಹ ಕೃತ್ಯ ನಡೆಸಿದ್ದಾರೆ.
ಹೀಗಾಗಿ ಕೃತ್ಯ ನಡೆಸಿದವರ ವಿರುದ್ಧ ಕದ್ರಿ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಇಂತಹ ಕೃತ್ಯ ಮರುಕಳಿಸಿದ್ರೆ ಅದೇ ಸ್ಥಳದಲ್ಲಿ ಶಂಖ ಜಾಗಟೆಗಳೊಂದಿಗೆ ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಪುನಃ ಎಚ್ಚರಿಕೆ ನೀಡಿದರು.