ಮಂಗಳೂರು: ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ನೇತೃತ್ವದಲ್ಲಿ ದ.ಕ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಮುಂಡಾಲ ಸಮುದಾಯದ ಮುಖಂಡರ ಸಭೆಯು ಕುದ್ಮುಲ್ ರಂಗರಾವ್ ಸ್ಮಾರಕ ಭವನ, ಬಿಜೈ, ಕಾಪಿಕಾಡ್‌ನಲ್ಲಿ ಜರುಗಿತು.
ರಾಜ್ಯ ಸರಕಾರದಿಂದ ಈಗಾಗಲೇ ಒಳಮೀಸಲಾತಿ ಕಲ್ಪಿಸಿರುವ, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಿದಲ್ಲಿ ಮುಂಡಾಲ ಸಮುದಾಯಕ್ಕೆ ಭಾರೀ ಅನ್ಯಾಯವಾಗಲಿದೆ. ದ.ಕ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಮುಂಡಾಲ ಸಮುದಾಯದ ಸ್ಪಷ್ಟ ದಾಖಲೆಯನ್ನು ಪಡೆಯದೆ ಜಾರಿಗೊಳಿಸಲು ಉದ್ದೇಶಿಸಿರುವ ಈ ಒಳಮೀಸಲಾತಿಯು ಅವೈಜ್ಞಾನಿಕವಾಗಿದ್ದು,
ಇದರಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತು, ಸರಕಾರಿ ನೌಕರರಿಗೆ ಉದ್ಯೋಗ, ಮುಂಬಡ್ತಿ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ, ಎಲ್ಲಾ ಸೌಲಭ್ಯದಿಂದ ಮುಂಡಾಲ ಸಮುದಾಯದ ಅಭಿವೃದ್ಧಿ ವಂಚಿತವಾಗಲಿದೆ. ಆದುದರಿಂದ ಈಗ ಜಾರಿಗೊಳಿಸಲು ಉದ್ದೇಶಿಸಿರುವ ಅವೈಜ್ಞಾನಿಕವಾದ ಒಳ ಮೀಸಲಾತಿಯನ್ನು ತಡೆಹಿಡಿದು ಈ ಹಿಂದಿನಂತೆ ಸಂವಿಧಾನದ ಆಶಯದಡಿ, ಸಾಮಾಜಿಕವಾದ ನ್ಯಾಯಕ್ಕಾಗಿ ಸಮಾನತೆಯ ಈ ಹಿಂದೆ ಇದ್ದ ಮೀಸಲಾತಿಯನ್ನು ಮುಂದುವರಿಸಬೇಕಾಗಿ ಆಗ್ರಹಿಸಲಾಯಿತು.
ಈ ಸಭೆಯಲ್ಲಿ ಕಚೂರು ಶ್ರೀ ಮಾಲ್ತಿದೇವಿ ಬಬ್ಬುಸ್ವಾಮಿ ಕ್ಷೇತ್ರದ ಆಡಳಿತ ಸಮಿತಿ, ಮುಂಡಾಲ ಮಹಾಸಭಾ ಉಡುಪಿ, ಮುಂಡಾಲ ಯುವ ವೇದಿಕೆ, ಪಡುಬಿದ್ರಿ, ಪ.ಜಾತಿ, ಪಂಗಡ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಹಾಗೂ ಬಬ್ಬುಸ್ವಾಮಿ ದೈವಸ್ಥಾನಗಳ ಪ್ರಮುಖರು, ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.