ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ಅವ್ಯವಸ್ಥೆಯ ವಿರುದ್ಧ ಕೈಕಂಬದಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಕೈಕಂಬ ಜಂಕ್ಷನ್‌ನಲ್ಲಿ ಎಸ್‌ಡಿಪಿಐ ಧ್ವಜವನ್ನು ಅನ್ವರ್ ಸಾದತ್ ಬಜತ್ತೂರುರವರು ಜಿಲ್ಲಾ ಉಪಾಧ್ಯಕ್ಷರೂ,ಕಾರ್ಯಕ್ರಮದ ಉಸ್ತುವಾರಿಯೂ ಆದ ಮೂನಿಶ್ ಅಲಿಯವರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರು ಮಾತನಾಡಿ ‘ಆಡಳಿತ ಸರ್ಕಾರವು ಜನರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲವಾಗಿದೆ. ಜನರಿಗೆ ಸುಗಮ ಸಂಚಾರಕ್ಕೆ ಸಮರ್ಪಕವಾದ ರಸ್ತೆಯನ್ನು ಮಾಡದೆ ಜನರನ್ನು ಲೂಟುವ ಟೋಲ್ ಗೇಟ್ ಮಾಡಿ ಕಳೆದ ಹನ್ನೆರಡು ವರ್ಷಗಳಿಂದ ವಸೂಲಿ ನಡೆಯುತ್ತಿದೆ.
ಟೋಲ್ ಮೊತ್ತವು ಹೆಚ್ಚಾಗುತ್ತಿರುವಾಗ ಕನಿಷ್ಠ ಮೂಲ ಸೌಕರ್ಯಗಳನ್ನು ಸಹ ಒದಗಿಸದೆ ಉತ್ತರ ಭಾರತೀಯ ಹಿಂದಿ ಭಾಷಿಕ ಗೂಂಡಾಗಳನ್ನು ಇರಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ.ಇಂತಹ ಅವ್ಯವಸ್ಥೆಯಿಂದ, ಅವೈಜ್ಞಾನಿಕತೆಯಿಂದ ಕೂಡಿರುವ ಈ ಟೋಲ್‌ಗೇಟನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲೆಯ ಜನತೆಯನ್ನು ಪಕ್ಷಾತೀತವಾಗಿ ಸೇರಿಸಿ ಹೋರಾಡಲು ಎಸ್‌ಡಿಪಿಐ ಸಿದ್ಧವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಜಲೀಲ್ .ಕೆ ರವರು ಮಾತನಾಡಿ ‘ಅವೈಜ್ಞಾನಿಕ, ಅಸಮರ್ಪಕವಾದ ಟೋಲ್ ಗೇಟ್ ಮಾಡಿ ಜನರನ್ನು ದಬ್ಬಾಳಿಕೆಯ ಮೂಲಕ ಲೂಟುವ ಉದ್ದೇಶ ನಿಮ್ಮದಾದರೆ ಅದಕ್ಕೆ ಅವಕಾಶವನ್ನು ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ ಮಾತನಾಡಿ’ ಈ ಟೋಲ್ ಗೇಟ್ ಕೆಲವು ಬಂಡವಾಳಶಾಹಿಗಳಿಗೆ, ರಾಜಕಾರಣಿಗಳಿಗೆ ವ್ಯಾಪಾರ ಕೇಂದ್ರವಾಗಿದೆ ಹೊರತು ಜನೋಪಕಾರಕ್ಕಿರುವುದಲ್ಲ. ಇದು ಒಂದು ಸುಲಿಗೆಯ ದಂಧೆಯ ಕೇಂದ್ರವೂ ಆಗಿದೆ’ ಎಂದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಮಾತನಾಡಿ ‘ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿ ಮತ್ತೊಮ್ಮೆ ಟೋಲ್ ವಸೂಲಿಗೆ ಇಳಿದರೆ ಈ ಟೋಲ್ ಗೇಟ್ ನೆಲಸಮ ಮಾಡುತ್ತೇವೆ’ ಎಂಬ ಎಚ್ಚರಿಕೆಯನ್ನು ನೀಡಿದರು.
ಕೈಕಂಬ ಜಂಕ್ಷನ್‌ನಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆಯಲ್ಲಿ ಅವೈಜ್ಞಾನಿಕ, ಅಸಮರ್ಪಕ ಟೋಲ್ ಗೇಟ್ ವಿರುದ್ಧ ಘೋಷಣೆ ಕೂಗಿ ಜನಸಾಮಾನ್ಯರು ಹಾಗೂ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶಾಹಿದಾ ತಸ್ನೀಂ ಸಿದ್ದೀಕ್ ಪುತ್ತೂರು,ಸಿದ್ದೀಕ್ ಅಲೆಕ್ಕಾಡಿ , ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ನೌರೀನ್ ಆಲಂಪಾಡಿ , ಝಾಹಿದಾ ಸಾಗರ್ , ರಹೀಮ್ ಇಂಜಿನಿಯರ್ , ಮೂಸಬ್ಬ ತುಂಬೆ, ಝಹನ ಅಕ್ಕರಂಗಡಿ , ಶಮೀರ್ ಪರ್ಲಿಯಾ , ಇಬ್ರಾಹಿಂ ಬಾಂಬಿಲ, ಅಬ್ದುಲ್ ಅಝೀಝ್ , ಇಸ್ಮಾಯಿಲ್, ಅಕ್ಬರ್ ಬೆಳ್ತಂಗಡಿ , ಅಶ್ರಫ್ ಬಾವು , ಅಕ್ಬರ್ ಅಲಿ ಪೊನ್ನೋಡಿ, ರಫೀಕ್ ಎಂಎಸ್ , ಶರೀಫ್ ವಳವೂರು, ಇರ್ಫಾನ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬೇಡಿಕೆಯನ್ನು ಮನವಿಯ ರೂಪದಲ್ಲಿ ಸಂಬಂಧಪಟ್ಟ ಅಧಿಕಾರಿಗೆ ನೀಡಲಾಯಿತು. ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.