ಮಂಗಳೂರು : ಈ ಬಾರಿ ಮಂಗಳೂರು ಮಹಾನಗರಪಾಲಿಕೆ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವುದು ಅನುಮಾನವಾಗಿದೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆ ಒಂದೆಡೆ ನಡೆಯುತ್ತಿದ್ದರೆ, ಮೀಸಲಾತಿ ಬದಲಾವಣೆ ಬಗ್ಗೆಯೂ ಪಕ್ಷಗಳ ಮುಖಂಡರಲ್ಲಿ ಒಳಗಿಂದೊಳಗೆ ಚರ್ಚೆಗಳು ನಡೆಯುತ್ತಿವೆ.
ಇದೇ ಕಾರಣದಿಂದ ಪಾಲಿಕೆ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಮಂಗಳೂರು ಮಹಾನಗರಕ್ಕೆ ಗಡಿ ಭಾಗದ ಅಡ್ಯಾರ್, ನೀರುಮಾರ್ಗ, ಉಳ್ಳಾಲ, ಕೊಣಾಜೆಯನ್ನು ಸೇರ್ಪಡೆಗೊಳಿಸಿ ‘ಗ್ರೇಟರ್ ಮಂಗಳೂರು’ ಪರಿಕಲ್ಪನೆ ಜಾರಿ ಪ್ರಸ್ತಾವನೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆ ಒಂದೆಡೆ ನಡೆಯುತ್ತಿದ್ದರೆ, ಮೀಸಲಾತಿ ಬದಲಾವಣೆ ಬಗ್ಗೆಯೂ ಪಕ್ಷಗಳ ಮುಖಂಡರಲ್ಲಿ ಒಳಗಿಂದೊಳಗೆ ಚರ್ಚೆ ನಡೆಯುತ್ತಿದೆ. ಇದೇ ಕಾರಣದಿಂದ ಮಹಾನಗರಪಾಲಿಕೆ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವುದು ಅನುಮಾನವಾಗಿದೆ.
ಮಂಗಳೂರು ಮಹಾನಗರಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ 44 ಬಿಜೆಪಿ, 14 ಕಾಂಗ್ರೆಸ್, 2 ಎಸ್‌ಡಿಪಿಐ ಸದಸ್ಯರಿದ್ದಾರೆ. ಕೆಲವೊಂದು ವ್ಯಾಪ್ತಿ ಮಹಾನಗರಪಾಲಿಕೆಗೆ ಸೇರ್ಪಡೆಯಾದರೆ ವಾರ್ಡ್ ಸೇರ್ಪಡೆ ಜತೆ ಮತಬ್ಯಾಂಕ್‌ಗಳು ವೃದ್ಧಿಯಾಗಬಹುದೆಂಬ ಲೆಕ್ಕಾಚಾರಗಳು ಈ ವಿಸ್ತರಣೆಯ ಹಿಂದಿದೆ. ಮಂಗಳೂರು ಮಹಾನಗರಕ್ಕೆ ಗಡಿ ಭಾಗದ ಅಡ್ಯಾರ್, ನೀರುಮಾರ್ಗ, ಉಳ್ಳಾಲ, ಕೊಣಾಜೆಯನ್ನು ಸೇರ್ಪಡೆಗೊಳಿಸಿ ‘ಗ್ರೇಟರ್ ಮಂಗಳೂರು’ ಪರಿಕಲ್ಪನೆ ಜಾರಿ ಪ್ರಸ್ತಾವನೆ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ವಿನಯ ಕುಮಾರ್ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭ ಈ ಹೊಸ ಚಿಂತನೆ ಹುಟ್ಟು ಹಾಕಿದ್ದು, ಉದ್ದೇಶಿತ ಪ್ರದೇಶಗಳು, ಅವುಗಳ ವಿಸ್ತೀರ್ಣ, ಜನಸಂಖ್ಯೆ ಸೇರಿದಂತೆ ನಾನಾ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಪಾಲಿಕೆ ಸಿದ್ಧಪಡಿಸಿತ್ತು. ಇದೀಗ ಸ್ಪೀಕರ್ ಯುಟಿ ಖಾದರ್ ಅವರು ಮಹಾನಗರಪಾಲಿಕೆಯನ್ನು ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವಿಸ್ತರಿಸಲು ಹೆಚ್ಚಿನ ಒಲವು ತೋರಿದಂತಿದೆ.
1996ರಲ್ಲಿ ಸುರತ್ಕಲ್ ಹಾಗೂ 2002ರಲ್ಲಿ ಪಚ್ಚನಾಡಿ ಹಾಗೂ ಕುಡುಪು ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಪಾಲಿಕೆಯಲ್ಲಿ ಪ್ರಸ್ತುತ ಒಟ್ಟು 60 ವಾರ್ಡ್‌ಗಳಿದ್ದು, ಸುರತ್ಕಲ್‌ನ ಇಡ್ಯಾ, ತಿರುವೈಲು, ಕಣ್ಣೂರು- ಜಪ್ಪಿನಮೊಗರು ಸೇತುವೆಯವರೆಗೆ ಪ್ರಸ್ತುತ ಪಾಲಿಕೆ ಚಾಚಿಕೊಂಡಿದೆ.
ಮಹಾನಗರಪಾಲಿಕೆಯನ್ನು ಮೂಲ್ಕಿ, ಅಡ್ಯಾರ್, ಕೊಣಾಜೆ, ನೀರುಮಾರ್ಗ, ಅರ್ಕುಳ ವ್ಯಾಪ್ತಿಯ ಕೆಲವೊಂದು ಗ್ರಾಮಗಳನ್ನು ಸೇರ್ಪಡೆ ಮಾಡುವುದಕ್ಕೆ ಈಗಾಗಲೇ ಅಪಸ್ವರ ಕೇಳಿ ಬಂದಿದೆ. ಗ್ರೇಟರ್ ಮಂಗಳೂರು ರಚನೆಯಿಂದಾಗುವ ಸಾಧಕ, ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕಾಗಿದೆ. ಆದರಿಂದ ನಗರ ಮತ್ತು ಸೇರ್ಪಡೆಯಾಗುವ ಪ್ರದೇಶಗಳ ಅಭಿವೃದ್ಧಿಗೆ ಆಗುವ ಪ್ರಯೋಜನ- ಸಮಸ್ಯೆ ಬಗ್ಗೆ ಸ್ಪಷ್ಟ ವಿವರ ಪಡೆಯಬೇಕಿದೆ. ಕೇವಲ ರಾಜಕೀಯ ಕಾರಣಕ್ಕಾಗಿ ನಗರ ವಿಸ್ತರಣೆ ಸಾಧುವಲ್ಲಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಹಾನಗರಪಾಲಿಕೆ ಸೇರ್ಪಡೆ ಪ್ರಸ್ತಾವನೆಯಲ್ಲಿಮೂಲ್ಕಿಯ ಮಾನಂಪಾಡಿ, ಬಪ್ಪನಾಡು, ಕಾರ್ನಾಡು, ಚಿತ್ರಾಪು, ಪಡುಪಣಂಬೂರು ಹಾಗೂ ಬೆಳ್ಳಾಯೂರು, ತೋಕೂರು-10, ಹಳೆಯಂಗಡಿ, ಪಾವಂಜೆ, ಸಸಿಹಿತ್ಲು, ಚೇಳಾೖರು ಮತ್ತು ಮಧ್ಯ, ಬಾಳ, ಕಳವಾರು, ಮಳವೂರು, ಕೆಂಜಾರು, ನೀರುಮಾರ್ಗ, ಬೊಂಡಂತಿಲ, ಬಜಪೆ, ಮೂಡುಶೆಡ್ಡೆ, ಪಡುಶೆಡ್ಡೆ, ಕೊಣಾಜೆ, ಬೆಳ್ಮ, ಮುನ್ನೂರು, ಉಳ್ಳಾಲ, ಪೆರ್ಮನ್ನೂರು, ಅಡ್ಯಾರು, ಅರ್ಕುಳ, ಸೋಮೇಶ್ವರ, ಕೋಟೆಕಾರು, ಜೋಕಟ್ಟೆಯ ತೋಕೂರು 62, ತಲಪಾಡಿ ಗ್ರಾಮಗಳಿವೆ.
ಮಹಾನಗರಪಾಲಿಕೆ ವ್ಯಾಪ್ತಿಗೆ ಗ್ರಾಮಗಳು ಸೇರಲು ನಾನಾ ಪ್ರಕ್ರಿಯೆಗಳಿವೆ. ನಗರಸಭೆ, ಪುರಸಭೆ, ಪಂಚಾಯಿತಿ ಪ್ರದೇಶಗಳನ್ನು ಪಾಲಿಕೆಗೆ ಸೇರಿಸುವುದಾದರೆ ಆಯಾ ಸ್ಥಳೀಯಾಡಳಿತದಲ್ಲಿ ‘ಮಂಗಳೂರು ಪಾಲಿಕೆಗೆ ನಮ್ಮ ವ್ಯಾಪ್ತಿ ಸೇರಲು ಒಪ್ಪಿಗೆಯಿದೆ’ ಎಂಬ ನಿರ್ಣಯವಾಗಿ ಪಾಲಿಕೆಗೆ ಬರಬೇಕು. ಈ ಕುರಿತ ವರದಿ ಪಾಲಿಕೆಗೆ ಬಂದ ಮೇಲೆ ಪಾಲಿಕೆಯಲ್ಲೂ ಸಮ್ಮತಿಯ ನಿರ್ಣಯವಾಗಬೇಕು. ಪಾಲಿಕೆಯಲ್ಲಿ ಮಾಡಿದ ನಿರ್ಣಯವನ್ನು ಸರಕಾರಕ್ಕೆ ಅನುಮತಿಗಾಗಿ ಕಳುಹಿಸಬೇಕು. ಅಲ್ಲಿ ಒಪ್ಪಿಗೆ ದೊರೆತು ಸರಕಾರದ ಆದೇಶ ಹೊರಬಿದ್ದ ನಂತರ ಕಾರ್ಯರೂಪಕ್ಕೆ ಬರುತ್ತದೆ.
ಮಹಾನಗರಪಾಲಿಕೆ ವ್ಯಾಪ್ತಿಯ ವಿಸ್ತರಣೆ ಸಾಧ್ಯತೆ ಈ ಬಾರಿ ಇಲ್ಲ. ಆದರೆ ಮೀಸಲಾತಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ಚುನಾವಣೆ ನಿಗದಿತ ಸಮಯಕ್ಕಿಂತ ವಿಳಂಬವಾಗುವ ಸಾಧ್ಯತೆ ಕಡಿಮೆ ಎಂದು ಮಂಗಳೂರು ಮಹಾನಗರ ಪಾಲಿಕೆ ಹಿರಿಯ ಕಾರ್ಪೊರೇಟರ್ ಒಬ್ಬರು ಹೇಳಿದ್ದಾರೆ.