ಮಂಗಳೂರು: ಕರ್ನಾಟಕದ ಪ್ರಸಿದ್ಧ ಮಂಗಳೂರು ವಿಶ್ವವಿದ್ಯಾನಿಲಯ. ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ಸಾವಿರಾರು ಎಕರೆ ಪ್ರದೇಶದ ಕ್ಯಾಂಪಸ್ ಹೊಂದಿರುವ ಈ ವಿ.ವಿ ಪ್ರಾರಂಭವಾಗಿ ಸುಮಾರು 44 ವರ್ಷವಾಗಿದೆ. ಪ್ರಾರಂಭದಲ್ಲಿ ಪ್ರಸಿದ್ದಿ ಪಡೆದಿದ್ದ ಈ ಯೂನಿವರ್ಸಿಟಿ, ಇದೀಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ.
ಇದರ ಪರಿಣಾಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನಿವೃತ್ತಿಯಾಗಿರುವ ಸುಮಾರು 15 ಪ್ರಾಧ್ಯಾಪಕರು ಸಹಿತ 50 ಮಂದಿಗೆ ಇನ್ನೂ ನಿವೃತ್ತಿ ವೇತನ ಪಾವತಿ ಮಾಡಲು ಸಾಧ್ಯವಾಗಿಲ್ಲ. ಸುಮಾರು 21 ಕೋಟಿ ರೂಗಳಿಗೂ ಹೆಚ್ಚು ನಿವೃತ್ತಿ ವೇತನ ಬಾಕಿ ಉಳಿಸಿಕೊಂಡು, ಹಣವಿಲ್ಲವೆಂದು ಹೇಳಿ ಸುಮ್ಮನಾಗಿಬಿಟ್ಟಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದಿನ ಹಲವು ಹಗರಣಗಳಿಂದ ಆಂತರಿಕ ಸಂಪನ್ಮೂಲ ಖಾಲಿಯಾಗಿದೆ. ಈ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯೂ ನಡೆಯುತ್ತಿದೆ. ಈ ನಡುವೆ ಕಳೆದ ಎರಡು ವರ್ಷದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅನಗತ್ಯವಾಗಿ ಮಾಡಿದ 187 ಮಂದಿಯ ನೇಮಕವನ್ನು ಸರ್ಕಾರ ಅನಧಿಕೃತ ಎಂದು ರದ್ದು ಮಾಡಿದೆ. ಹೀಗಿದ್ದರೂ 30ರಿಂದ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಧ್ಯಾಪಕರು, ಸಿಬ್ಬಂದಿಗಳು ನಿವೃತ್ತಿ ವೇತನ ಪಡೆಯಲು ನಿತ್ಯ ವಿ.ವಿ ಸಹಿತ ವಿವಿಧ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.