ಮಂಗಳೂರು: ಮಂಗಳೂರು ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಭೂಕುಸಿತದಿಂದ ಹಾನಿಗೊಳಗಾಗಿದ್ದ ರೈಲ್ವೆ ಹಳಿಯನ್ನು ಪ್ರಾಕೃತಿಕ ವಿಕೋಪದ ನಡುವೆಯೂ ದುರಸ್ಥಿ ಮಾಡಲು ರೈಲ್ವೆ ಇಲಾಖೆ ಯಶಸ್ವಿಯಾಗಿದೆ.
ಪಶ್ಚಿಮ ಘಟ್ಟದ ಎಡಕುಮೇರಿ-ಕಡಗರವಳ್ಳಿ ನಡುವೆ ರೈಲು ಹಳಿ ಬಳಿ ಭೂ ಕುಸಿತದಿಂದ ಹಾನಿಯಾಗಿದ್ದೆ ರೈಲ್ವೆ ಹಳಿಯನ್ನು ಮರು ಸ್ಥಾಪಿಸಲು ರೈಲ್ವೆ ಇಲಾಖೆ ಯಶಸ್ವಿಯಾಗಿದೆ. ಕಳೆದ ಒಂದು ವಾರದಿಂದ ಹಗಲು ರಾತ್ರಿಯೆನ್ನದೆ ಕೆಲಸ ನಿರ್ವಹಿಸಿದ ರೈಲ್ವೆ ಇಲಾಖೆಯ ಸಿಬ್ಬಂದಿಗಳು ಕೊನೆಗೂ ತಮ್ಮ ಗುರಿಯನ್ನು ಮುಟ್ಟಿದ್ದಾರೆ.
ಕಳೆದ ರಾತ್ರಿ ರೈಲು ಎಂಜಿನ್ ಹಳಿ ಮೇಲೆ ಸಂಚರಿಸಿ ಹಳಿ ಪರಿಶೀಲನೆ ನಡೆಸಿದೆ. ಇಂದಿನಿಂದ ಎರಡು ದಿನಗಳ ಕಾಲ ಗೂಡ್ ರೈಲು ಸಂಚರಿಸಲಿದ್ದು, ಮಂಗಳವಾರದಿಂದಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕ ರೈಲು ಪುನಾರಂಭಗೊಳ್ಳುವ ನಿರೀಕ್ಷೆ ಇದೆ. ಇನ್ನು ಇಲ್ಲಿ ಹಳಿಗೆ ಗುಡ್ಡು ಕುಸಿತದ ಪ್ರಾಕೃತಿಕ ಅವಘಡದ ಬಳಿಕ ಜುಲೈ 26ರಿಂದ ಈ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ನಡುವಿನ ರೈಲು ಓಡಾಟ ಸಂಪೂರ್ಣ ರದ್ದುಗೊಳಿಸಲಾಗಿತ್ತು. ಸುಮಾರು 500ಕ್ಕೂ ಅಧಿಕ ರೈಲ್ವೆ ತಾಂತ್ರಿಕ ಅಧಿಕಾರಿ, ಸಿಬ್ಬಂದಿ ಹಗಲು ರಾತ್ರಿ ಭಾರಿ ಮಳೆಯ ಅಡಚಣೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದರು.
ಇದೀಗ ಹಳಿ ಯಥಾಸ್ಥಿತಿಗೆ ತರುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅಲ್ಲದೆ ಪರೀಕ್ಷಾರ್ಥ ತಾಂತ್ರಿಕ ರೈಲು ಓಡಾಟವನ್ನೂ ಯಶಸ್ವಿಯಾಗಿ ನಡೆಸಲಾಗಿದೆ. ತುರ್ತು ಸಂದರ್ಭ ನಿಭಾಯಿಸಲು ರೈಲ್ವೆ ತಾಂತ್ರಿಕ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ. ಇನ್ನು ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಬಾಕಿ ಇದ್ದು, ಸದ್ಯ ಪರೀಕ್ಷಾರ್ಥ ಗೂಡ್ ರೈಲು ಸಂಚಾರ ನಡೆಸಲಾಗುತ್ತಿದೆ.