ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ನಿಟ್ಟೆ ಹವಾಮಾನ ಕ್ರಿಯಾ ಯೋಜನೆ – 2024 (Nitte Climate Action Program 2024) ಕಾರ್ಯಕ್ರಮಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಅವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಪರಿಸರ ಪ್ರಿಯವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸರ ರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಪರಿಸರವನ್ನು ಕಾಪಾಡುವುದು ನಮ್ಮ ಕೆಲಸವಲ್ಲ ಸರ್ಕಾರದ ಕೆಲಸ ಎಂದು ಭಾವಿಸುವುದು ತಪ್ಪು. ಅದು ಎಲ್ಲ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಮಾತನಾಡಿದ ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಎಸ್. ಪಟಗಾರ್, ಶಾಲಾ ಮಟ್ಟದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಾದ್ದು ಅತಿ ಮುಖ್ಯವಾದ ಕೆಲಸವಾಗಿದೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ಹಾಗೂ ಉತ್ತರ ಎರಡೂ ವಿಭಾಗಗಳಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ವರ್ಷ ಮಂಗಳೂರು ಉತ್ತರ ವಿಭಾಗದ 103 ಶಾಲೆಗಳಿಂದ 13 ಸಾವಿರ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಬಹು ಸಂತಸದ ವಿಷಯ ಎಂದು ಅವರು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ಮಾತನಾಡಿ, ಮಾಲಿನ್ಯ ನಿಯಂತ್ರಣದ ಮಹತ್ವವನ್ನು ವಿವರಿಸಿದರು. ಮಾಲಿನ್ಯ ನಿಯಂತ್ರಣದಿಂದ ಭವಿಷ್ಯವನ್ನು ಹೇಗೆ ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಅವರು ಉದಾಹರಣೆಗಳ ಸಮೇತ ವಿವರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅವರು, ಪರಿಸರ ರಕ್ಷಣೆಗೆ ನಿಟ್ಟೆ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಪರಿಸರ ರಕ್ಷಣೆಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು. ಇದಕ್ಕಾಗಿ ನಿಟ್ಟೆ ವಿಶ್ವವಿದ್ಯಾನಿಲಯವು ಸದಾ ಸಿದ್ಧವಿದೆ. ಈ ಆಶಯದ ಪ್ರತಿಫಲವೇ ನಿಟ್ಟೆ ಹವಾಮಾನ ಕ್ರಿಯಾ ಯೋಜನೆ ಎಂದು ಅವರು ವಿಶ್ಲೇಷಿಸಿದರು.
ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಆರೋಗ್ಯ ಮತ್ತು ಸುರಕ್ಷೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುದರ್ಶನ್ ಹಾಗೂ ಪರಿಸರ ವಿಭಾಗದ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಸುಸ್ಥಿರ ಅಭಿವೃದ್ಧಿ ಕೋಶದ ಪ್ರಧಾನ ಸಂಚಾಲಕರು ಹಾಗೂ ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾದ ಪ್ರೊ.ಡಾ.ಸುಮಾ ಬಲ್ಲಾಳ್ ಅವರು ಸ್ವಾಗತ ಭಾಷಣ ಮಾಡಿದರು. ಡಾ. ಮುಂಡಕೂರು ರಾಮಣ್ಣ ಶೆಟ್ಟಿ ಸ್ಮಾರಕ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲತಾ ರಾವ್ ವಂದನಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಿಟ್ಟೆ ವಿಶ್ವವಿದ್ಯಾನಿಲಯವು ಹವಾಮಾನ ಕ್ರಿಯಾ ಯೋಜನೆ ಕುರಿತು ನಿರ್ಮಿಸಿರುವ ಕಿರು ವಿಡಿಯೊ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಸಹ ಪ್ರಾಧ್ಯಾಪಕ ಡಾ. ನೇಸರ ಕಾಡನಕುಪ್ಪೆ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟರು.
ನಿಟ್ಟೆ ಹವಾಮಾನ ಕ್ರಿಯಾ ಯೋಜನೆಯು ಒಟ್ಟು 5 ವರ್ಷಗಳ ಕಾಲ ನಡೆಯಲಿದ್ದು, ಇದು ಎರಡನೇಯ ವರ್ಷದ ಕಾರ್ಯಕ್ರಮವಾಗಿದೆ. 2024ರ ಈ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಲಯದಿಂದ ಒಟ್ಟು 103 ಶಾಲೆಗಳಿಂದ 13 ಸಾವಿರ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ತಾಂತ್ರಿಕ ಸಂಶೋಧನೆ ನಿರ್ದೇಶಕ ಪ್ರೊ.ಡಾ.ಜಿ. ಶ್ರೀನಿಕೇತನ್, ಸುಸ್ಥಿರ ಅಭಿವೃದ್ಧಿ ಕೋಶದ ಸದಸ್ಯ ಕಾರ್ಯದರ್ಶಿ ಡಾ.ವಿನಾಯಕ ಶೇಟ್, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಶಶಿಕುಮಾರ ಶೆಟ್ಟಿ ಭಾಗವಹಿಸಿದ್ದರು.