ಮಂಗಳೂರು: ಕಳೆದ 46 ವರ್ಷಗಳಿಂದ ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ ಕಲಾ ವ್ಯವಸಾಯ ನಡೆಸುತ್ತಿರುವ ನಿಷ್ಠಾವಂತ ಯಕ್ಷಕಲೋಪಾಸಕ. ಕಟೀಲು, ಆದಿ ಸುಬ್ರಮಣ್ಯ, ಪುತ್ತೂರು, ಕಾಂತಾವರ, ಮಧೂರು, ಕದ್ರಿ, ಮಂಗಳಾದೇವಿ, ಎಡನೀರು ಮೇಳಗಳಲ್ಲಿ ತಿರುಗಾಟ ನಡೆಸಿರುವ ಶ್ರೀ ಪಾವಂಜೆ ಮೇಳದ ಪ್ರಧಾನ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರಿಗೆ ಕದ್ರಿ ಯಕ್ಷ ಬಳಗವು “ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ” ನೀಡಿ ಗೌರವಿಸಲಿದೆ.
ಡಿಸೆಂಬರ್ 2 ಸೋಮವಾರ ಕದ್ರಿ ದೇವಸ್ಥಾನದ ರಾಜಾoಗಣ ದಲ್ಲಿ, ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕದ್ರಿ ಯಕ್ಷ ಬಳಗದ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರದೀಪ್ ಆಳ್ವ ಕದ್ರಿ ತಿಳಿಸಿದ್ದಾರೆ.
ಕಾಶೀ ಮಾಣಿ, ಕುಚೇಲ,ಬಾಹುಕ, ಪಾಪಣ್ಣ, ವಿಜಯ, ಮಾಲಿನಿ ದೂತ ಮೊದಲಾದ ಪಾತ್ರ ಗಳ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಹೊಂದಿರುವ ಮವ್ವಾರು ಅವರು ಕ್ರಿಯಾಶೀಲ ರಾಜ ಹಾಸ್ಯಗಾರ ಎಂದು ಗುರುತಿಸಲ್ಪಟ್ಟಿದ್ದಾರೆ.
ಹಲವು ದಶಕಗಳ ಕಾಲ ಇತಿಹಾಸ ಪ್ರಸಿದ್ದ ಕದ್ರಿ ಕಂಬಳ ಸಂಯೋಜಕರಾಗಿ, ಕದ್ರಿ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದ ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಅವರ ನೆನಪಿನಲ್ಲಿ ಪ್ರಶಸ್ತಿವಿತರಿಸಲಾಗುವುದು. ನಂತರ ಪಟ್ಲ ಸತೀಶ್ ಶೆಟ್ಟಿ ಅವರ ನಿರ್ದೇಶನದಲ್ಲಿ “ಶ್ರೀ ಶಬರಿಮಲೆ ಅಯ್ಯಪ್ಪ ” ಯಕ್ಷಗಾನ ಪ್ರದರ್ಶನ ಇದೆ.