ಮಂಗಳೂರು: ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಶ್ವಾನ, ಲ್ಯಾಬ್ರಡಾರ್ ತಳಿಗೆ ಸೇರಿದ ಜ್ಯೂಲಿಗೆ ನಿವೃತ್ತಿ ಘೋಷಿಸಲಾಯಿತು.
ದೀರ್ಘ ಸೇವೆ ಬಳಿಕ ಶ್ವಾನದಳ ಕೆಲಸದ ಒತ್ತಡದಿಂದ ತಮ್ಮ ಸೂಕ್ಷ್ಮತೆಯನ್ನು ನಿಧಾನವಾಗಿ ಕಳೆದುಕೊಳ್ಳುವು ದರಿಂದ ಹಾಗೂ ಅವುಗಳ ಮೇಲೆ ಅಧಿಕ ಒತ್ತಡ ಹೇರದಿರುವ ಉದ್ದೇಶದಿಂದ ಅವುಗಳನ್ನು ನಿವೃತ್ತಿಗೊಳಿಸಲಾಗುತ್ತದೆ.
ಜೂಲಿ 2013ರ ಮಾರ್ಚ್ 26ಕ್ಕೆ ಸೇವೆಗೆ ಸೇರಿದ್ದಳು. ಆಕೆಯ ಜಾಗಕ್ಕೆ ರಿಯೋನನ್ನು ತರಲಾಗಿದೆ. ನಿವೃತ್ತಳಾದ ಜೂಲಿಗೆ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ ಪ್ರೀತಿ ತೋರಿದ ಸಿಐಎಸ್‌ಎಫ್ ಸಿಬಂದಿ, ಹೂಗಳಿಂದ ಅಲಂಕರಿಸಲಾದ ಪುಟ್ಟ ಟ್ರಾಲಿಯಲ್ಲಿ ಕೂರಿಸಿ, ಅದನ್ನು ಎಲ್ಲರೂ ಸೇರಿ ಎಳೆಯುವ ಮೂಲಕ ಗೌರವಿಸಿದರು.
ದತ್ತು ಪಡೆದ ಹ್ಯಾಂಡ್ಲರ್
ಜೂಲಿಯನ್ನು ಅವಳ ಹ್ಯಾಂಡ್ಲರ್ ಆಗಿರುವ ಸಿಐಎಸ್‌ಎಫ್ ಯೋಧ ಕುಮಾರ್ ದತ್ತು ಸ್ವೀಕರಿಸಿದ್ದಾರೆ
ಪ್ರಸ್ತುತ 11 ತಿಂಗಳ ರಿಯೋ ಝಾರ್ಖಂಡ್‌ನ ರಾಂಚಿಯ ಕೇಂದ್ರೀಯ ಸಶಸ್ತ್ರ ಬಲಗಳ ಡಾಗ್‌ಸ್ಕ್ವಾಡ್ ತರಬೇತಿ ಕೇಂದ್ರದಿಂದ ತರಬೇತಿ ಪಡೆದು ವಿಮಾನ ನಿಲ್ದಾಣದ ಸಿಐಎಸ್‌ಎಫ್‌ಗೆ ಸೇರ್ಪಡೆಗೊಂಡಿದೆ. ಪ್ರಸ್ತುತ ಇಲ್ಲಿ ಜೂಲಿ ನಿವೃತ್ತಿ ಬಳಿಕ ರಿಯೋ(ಲ್ಯಾಬ್), ಗೋಲ್ಡಿ(ಗೋಲ್ಡನ್ ರಿಟ್ರೀವರ್) ಹಾಗೂ ಮ್ಯಾಕ್ಸ್ ಮತ್ತು ರೇಂಜರ್(ಬೆಲ್ಜಿಯನ್ ಮಲಿನೊಯ್ಸ) ಶ್ವಾನಗಳಿವೆ.