ಮಂಗಳೂರು: ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಘಟಕವಾದ ಮಿಲಾಗ್ರಿಸ್ ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್‌ನ ಬಿಎಸ್ಸಿ ನರ್ಸಿಂಗ್ ಕೋರ್ಸ್ ನ ಉದ್ಘಾಟನೆಯು ನವೆಂಬರ್ 4 ಸೋಮವಾರದಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಒಲವಿನಹಳ್ಳಿಯ ಸುಪೀರಿಯರ್ ರೆವರೆಂಡ್ ಐಲೀನ್ ಮಥಿಯಾಸ್, ನರ್ಸಿಂಗ್ ಕಾಲೇಜು ಪ್ರಾರಂಭಿಸುವುದು ಸುಲಭದ ಕೆಲಸವಲ್ಲ. ಆದರೆ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ಮಹತ್ತರ ಕಾರ್ಯವನ್ನು ಕೈಗೊಂಡಿದೆ. ನರ್ಸಿಂಗ್ ಒಂದು ಉದಾತ್ತ ವೃತ್ತಿಯಾಗಿದ್ದು ಉದ್ಯೋಗ ರಂಗದಲ್ಲಿ ಅತ್ಯಂತ ಬೇಡಿಕೆಯ ಕ್ಷೇತ್ರವೂ ಆಗಿದೆ.
ನರ್ಸಿಂಗ್ ಕೇವಲ ಒಂದು ಉದ್ಯೋಗವಲ್ಲ, ಇದು ಸಮಾಜದಲ್ಲಿ ಸೇವೆ ಸಲ್ಲಿಸಲು ಮತ್ತು ಅಗತ್ಯವಿರುವ ಸಮಯದಲ್ಲಿ ರೋಗಿಗಳಿಗೆ ಕಾಳಜಿಯನ್ನು ತೋರಿಸುವ ಕ್ಷೇತ್ರವಾಗಿದ್ದು ಮಾನಸಿಕವಾಗಿ ಕುಗ್ಗಿದ ಜೀವಗಳಿಗೆ ಧೈರ್ಯ ನೀಡಿ ಅವರ ಕುಟುಂಬಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು. ಈಗಾಗಲೇ ಬಿಎಸ್ಸಿ ನರ್ಸಿಂಗ್ ಕೋರ್ಸ್ ಗೆ ದಾಖಲಾತಿ ಆರಂಭವಾಗಿದ್ದು ಇನ್ನು ಕೆಲವೇ ಸೀಟುಗಳು ಖಾಲಿ ಇವೆ ಎಂದು ಕ್ಯಾಂಪಸ್ ನಿರ್ದೇಶಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಉದಯ್ ಫೆರ್ನಾಂಡಿಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೆಲ್ವಿನ್ ವಾಜ್, ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನ ಉಪ ಪ್ರಾಂಶುಪಾಲರಾದ ವಿಕ್ಟೋರಿಯಾ ಮತ್ತು ಸಿಬ್ಬಂದಿ ಸದಸ್ಯ ಐರಿನ್ ಅಲ್ವಾರೆಸ್ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕರಾದ ಬೊನವೆಂಚರ್ ನಜರೆತ್ ಸ್ವಾಗತಿಸಿ, ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾದರ್ ಡಾ.ಮೈಕಲ್ ಸಾಂತುಮಾಯೊರ್ ವಂದಿಸಿದರು. ಗ್ಲಾನ್ಸಿಯಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.