ಮಂಗಳೂರು: ಬಂಟ್ವಾಳದ ಬೋಳಂತೂರು ಗಣೇಶೋತ್ಸವದಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್ ಬಿದ್ದಿದೆ. ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಈ ಭಾಗದಲ್ಲಿ ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ಹಂಚಿದ್ದರು. ಆ ಮೂಲಕ ಸೌಹಾರ್ದತೆ ಮೆರೆದಿದ್ದು ಸುದ್ದಿಯಾಗಿತ್ತು. ಆದರೆ, ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿದ್ದಾರೆ.
ಮಸೀದಿಯೊಂದಕ್ಕೆ ಗಣೇಶೋತ್ಸವ ಆಯೋಜಕರು ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ’’ ಎಂದು ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ಬರೆದಿದೆ.
ಕಳೆದ ವರ್ಷ ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಸಿಹಿ ತಿಂಡಿ ಹಂಚುತ್ತಿರುವುದು ನಡೆದುಬಂದಿದೆ. ಆದರೆ, ಕಳೆದ ಬಾರಿ ತಂಪು ಪಾನೀಯ, ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥರಾದ ಆರೋಪದಲ್ಲಿ ಅದಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಎರಡು ಸಮುದಾಯಗಳ ನಡುವಣ ಸಾಮರಸ್ಯ ಕೆಡುವ ಆತಂಕವೂ ಎದುರಾಗಿದೆ.