ಮಂಗಳೂರು: ಹೈಕೋರ್ಟ್ ಆದೇಶದಂತೆ ಲೋಕಾಯುಕ್ತ ತನಿಖಾಧಿಕಾರಿ ಮುಂದೆ ಹಾಜರಾಗಿ ಅವರ ಪ್ರಶ್ನೆಗೆ ಉತ್ತರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ತೋರಿದ್ದಾರೆ ಇದನ್ನು ಕೂಡ ಬಿಜೆಪಿಯವರು ಗೇಲಿ ಮಾಡುತ್ತಿರುವುದು ಖಂಡನಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಟೀಕಿಸಿದರು.
ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಐವನ್ ಕಾನೂನಿನ ಮುಂದೆ ಎಲ್ಲರೂ ಸಮಾನ ಎಂದು ಡಂಗುರ ಸಾರಿದ ಬಿಜೆಪಿ ಸಿಎಂ ನಡೆಯನ್ನು ಈಗ ನಾಟಕ ಎನ್ನತೊಡಗಿದ್ದಾರೆ. ಬಿ ರಿಪೋರ್ಟ್ ಹಾಕುವ ತಂತ್ರ ಎನ್ನುತ್ತಾರೆ. ಹಾಗಾದರೆ ಹೈಕೋರ್ಟ್ ಆದೇಶವನ್ನು ಅವರು ಸ್ವೀಕಾರ ಮಾಡಿದ್ದು ಯಾಕೆ? ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಅವರು ಬದುಕಿನಲ್ಲಿ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ, ಅದೇ ಅವರ ಆತ್ಮಸ್ಥೈರ್ಯಕ್ಕೆ ಕಾರಣ ಎಂದರು.
2013ರಲ್ಲಿ ಲೋಕಾಯುಕ್ತ ಪ್ರಕರಣ ದಾಖಲಿಸಿದ್ದಾಗ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರಾ? ಅವರು ಚಾರ್ಜ್ ಶೀಟ್ ಆದ ಬಳಿಕ ರಾಜೀನಾಮೆ ಕೊಡಬೇಕಾಯಿತು. ಅವರ ಪುತ್ರ ವಿಜಯೇಂದ್ರ ವಿರುದ್ಧ 14 ಇಡಿ ಕೇಸ್ ಇದೆಯಲ್ಲ ಅದಕ್ಕೆ ಏನು ಹೇಳುತ್ತಾರೆ? ಗ್ಯಾರಂಟಿ ಯೋಜನೆಗಳಲ್ಲಿ 53,000 ಕೋಟಿ ರೂ. ನೇರವಾಗಿ ಜನರಿಗೆ ಪಾವತಿ ಮಾಡುತ್ತಿದ್ದೇವೆ, ಅದಕ್ಕೆ ಬಿಜೆಪಿಗೆ ಹೊಟ್ಟೆಕಿಚ್ಚು. ಲೋಕಾಯುಕ್ತರಿಗೆ ಸಿಎಂ ಭೀತಿ ಕಾಡುತ್ತಿದೆ ಎಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ, ಪ್ರಜಾಪ್ರಭುತ್ವಕ್ಕೆ ಬೆಲೆಕೊಡುವುದು ಕಲಿಯಲಿ ಎಂದರು.
ವಿಪಕ್ಷಗಳಿಗೆ ಜನರ ಬಗ್ಗೆ ಹಿತಾಸಕ್ತಿ ಇಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಲೋಕಾಯುಕ್ತ ಮುಂದೆ ಹೋಗಿದ್ದರಲ್ಲ, ಹಾಗಾದರೆ ಅವರು ರಾಜೀನಾಮೆ ಕೊಟ್ಟರಾ? ಈಗ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ ಅದಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ. ವಕ್ಫ್ ವಿಚಾರ ಅದಕ್ಕಾಗಿಯೇ ಮುನ್ನೆಲೆಗೆ ತಂದಿದ್ದಾರೆ. ಬಿಜೆಪಿಗೆ ಯಾವುದರಲ್ಲೂ ನಂಬಿಕೆ ಇಲ್ಲ. ಜನರ ಬಗ್ಗೆ ಹಿತಾಸಕ್ತಿ ಇಲ್ಲ, ಹಿಟ್ ಆ್ಯಂಡ್ ರನ್ ಮಾತ್ರ. ಸರಕಾರದ ನೆರಳಾಗಿರಬೇಕಾದ ವಿಪಕ್ಷ ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಕೈಬಿಡಲಿ ಎಂದು ಹೇಳಿದರು.