ಪುತ್ತೂರು: ಕನಸು ಒಂದು ಸುದೀರ್ಘವಾದ ಪಯಣ. ಕನಸುಗಳಿಲ್ಲದ ಬದುಕು ಅಸಾಧ್ಯ. ಕನಸಿನ ಯಾತ್ರೆಗೆ ಒಂದು ಸ್ಪಷ್ಟವಾದ ದಾರಿ ಇರಬೇಕು. ಕ್ರಮಿಸುವ ಹಾದಿಯಲ್ಲಿ ಬದ್ಧತೆಗಳು ಸೇರಿಕೊಂಡಾಗ ಯಾವ ನಿರ್ಧಾರಗಳು ಸಡಿಲವಾಗಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಪ್ರತಿಕೂಲ ಸಮಸ್ಯೆಗಳು ನಮ್ಮನ್ನು ಯಶಸ್ಸಿನಿಂದ ಹಿಮ್ಮೆಟ್ಟಿಸದಿರಲಿ. ಚುಚ್ಚಬಲ್ಲ ಮುಳ್ಳುಗಳನ್ನು ಕೊಡವಿಕೊಂಡು ಮತ್ತೆ ಹೆಜ್ಜೆಗಳನ್ನು ಇಡುವಲ್ಲಿ ದೃಢನಿರ್ಧಾರದ ಅಗತ್ಯವಿದೆ.
ವಿದ್ಯಾರ್ಥಿಗಳು ಕಂಡ ಕನಸಿನ ಸಿದ್ಧತೆ ಮೊಳಕೆ ಒಡೆಯುವಂತಹ ಕಾರ್ಯಕ್ರಮ ಇದಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಡಾ. ಕೆ.ಎಮ್. ಕೃಷ್ಣ ಭಟ್‌ಹೇಳಿದರು. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಅಹಲ್ಯಾಬಾಯಿ ಹೋಳ್ಕರ್ ವೇದಿಕೆಯಲ್ಲಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ ರಾಜ್ಯಮಟ್ಟದ “ಕನಸುಗಳು – 2024” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೃಷ್ಣಪ್ರಸನ್ನ ಕೆ. ಮಾತನಾಡಿ, ಪ್ರತಿಯೊಬ್ಬನ ಕನಸು ನನಸಾಗಲು ಉತ್ತಮ ಮಾರ್ಗದರ್ಶನ ಅಗತ್ಯ. ಹದಿವಯಸ್ಸಿನ ಮಕ್ಕಳು ಕಾಣುವ ಕನಸುಗಳಿಗೆ ಪೋಷಣೆ, ಉತ್ತೇಜನವನ್ನು ನೀಡುವ ಕಾರ್ಯವನ್ನು ವಿವೇಕಾನಂದ ವಿದ್ಯಾಸಂಸ್ಥೆ ಹಲವು ದಶಕಗಳಿಂದ ಮಾಡುತ್ತಿದೆ ಎಂದು ನುಡಿದರು.
ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ನಿವೃತ್ತ ಹಿರಿಯ ವಿಜ್ಞಾನಿ ಡಾ.ಕೆ.ಎನ್. ಸುಬ್ರಹ್ಮಣ್ಯ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ , ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳಿಗೆ ಸಿಗುವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ನಮ್ಮಲ್ಲಿನ ಸೃಜನಶೀಲತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತವೆ.
ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ವಿವೇಕಾನಂದ ಪದವಿಪೂರ್ವ ವಿದ್ಯಾಲಯ ಸೂಕ್ತ ವೇದಿಕೆಯನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಲಭ್ಯ ಅವಕಾಶಗಳನ್ನು ಬಳಸಿಕೊಂಡು ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ವಿನೋದಾವಳಿಗಳ ಮಳಿಗೆಗಳನ್ನು ಡಾ.ಕೆಎನ್‌ಸುಬ್ರಹ್ಮಣ್ಯ ಉದ್ಘಾಟಿಸಿದರು.
ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ., ನಿರ್ದೇಶಕರಾದ ವತ್ಸಲಾ ರಾಜ್ಞಿ, ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು,ಕಾಲೇಜಿನ ಪ್ರಾಂಶುಪಾಲರಾದ ಮಹೇಶ್‌ನಿಟಿಲಾಪುರ, ಕನಸುಗಳು ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ದಯಾಮಣಿ ಟಿ.ಕೆ. ಉಪಸ್ಥಿತರಿದ್ದರು. ಉಪನ್ಯಾಸಕಿ ದೀಕ್ಷಿತಾ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪನ್ಯಾಸಕಿ ಅನುಪಮಾ ಶೇಟ್ ವಂದಿಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಯಶವಂತಿ ನಿರೂಪಿಸಿದರು.