ಮಂಗಳೂರು: ಮಂಗಳೂರಿನ ಕ್ರೈಸ್ತ ಯುವ ಸಮುದಾಯ ಉತ್ತಮ ಶಿಕ್ಷಣ ಪಡೆದು ಕೈತುಂಬಾ ಹಣಗಳಿಕೆಯ ಉದ್ದೇಶಕ್ಕಾಗಿ ವಿದೇಶದಲ್ಲಿ ಉದ್ಯೋಗ ಪಡೆಯುವತ್ತ ಗಮನ ಹರಿಸುತ್ತಿರುವುದು ಜಾಸ್ತಿಯಾಗುತ್ತಿದೆ. ಆದರೆ ದೇಶದ ಅಭಿವೃದ್ಧಿಗೆ ಉತ್ತಮ ಐಎಎಸ್, ಐಪಿಎಸ್, ಮಿಲಿಟರಿ ಅಧಿಕಾರಿಗಳು, ಉದ್ಯಮಿಗಳ ಅಗತ್ಯವಿದೆ. ಕ್ರೈಸ್ತ ಯುವ ಸಮುದಾಯ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕುಲಶೇಖರ ಕೋರ್ಡೆಲ್ ಸಭಾಂಗಣದಲ್ಲಿ ರವಿವಾರ ನಡೆದ ಕೊಂಕಣಿ ಕೆಥೋಲಿಕ್ ಉದ್ಯಮಿಗಳು, ವೃತ್ತಿಪರರು ಮತ್ತು ಕೃಷಿಕರ ಸಂಸ್ಥೆ ‘ರಚನಾ’ದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮನೆಗಳ ಹಿರಿಯರಲ್ಲಿ ಅಭದ್ರತೆ ಕಾಡುತ್ತಿರುವುದು ಮಾತ್ರವಲ್ಲದೆ, ಅವರು ವೃದ್ಧಾಶ್ರಮ ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಆರ್ಚ್ ಬಿಷಪ್ ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಪುಣೆಯ ಮಿಲಿಟರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಮಾಂಡೆಂಟ್ ರಿಯರ್ ಅಡ್ಮಿರಲ್ ನೆಲ್ಸನ್ ಡಿಸೋಜ ಮಾತನಾಡಿ, ರಚನಾ ಸಂಸ್ಥೆ ಉದ್ಯಮದ ಜತೆಗೆ ಉದ್ಯಮಶೀಲತ್ವವನ್ನು ಬೆಳೆಸುವ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದು, ಇದು ಮತ್ತಷ್ಟು ಮುಂದುವರಿಯುವಂತಾಗಬೇಕು ಎಂದರು.
ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಉದ್ಯಮಿಗಳಾದ ಮೈಕಲ್ ಡಿಸೋಜ, ‘ರಚನಾ’ದ ಅಧ್ಯಕ್ಷ ಅಧ್ಯಕ್ಷ ಜಾನ್ ಮೊಂತೆರೊ, ರಚನಾ ಸಂಚಾಲಕಿ ಮಾರ್ಜೊರಿ ಟೆಕ್ಸೇರ, ಕಾರ್ಯದರ್ಶಿ ವಿಜಯ್ ವಿಶ್ವಾಸ್ ಲೋಬೊ, ಕಾರ್ಯಕಾರಿ ಸಮಿತಿ ಸದಸ್ಯ ಜೆ.ಆರ್. ಲೋಬೊ ಉಪಸ್ಥಿತರಿದ್ದರು.
ಈ ಸಂದರ್ಭ 25 ವರ್ಷಗಳ ಸವಿನೆನಪಿಗಾಗಿ ಕೊಂಕಣಿ ಕ್ರೈಸ್ತ ಯುವ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ‘ರಚನಾ ಕೆಥೋಲಿಕ್ ಸೌಹಾರ್ದ ಸಹಕಾರಿ ಸಂಘ’ ಯೋಜನೆಯ ಉದ್ಘಾಟನೆ ನಡೆಯಿತು. ರಚನಾ ಆರಂಭಿಸಲು ಕಾರಣ ಕರ್ತರಾದ ಮಾರಿಟ್ಟೊ ಸಿಕ್ವೇರ ಅವರನ್ನು ಈ ಈ ಸಂದರ್ಭ ಸನ್ಮಾನಿಸಲಾಯಿತು. ರಚನಾ ಸ್ಥಾಪನೆ ಮತ್ತು ನಡೆದು ಬಂದ ಹಾದಿಯ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.