ಮಂಗಳೂರು: ಆ.6 ರ ಸೋಮವಾರದಂದು ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ 37 ನೇ ವಿದ್ಯಾರ್ಥಿ ಪರಿಷತ್ತನ್ನು ಮಂಗಳೂರು ಚಾರ್ಟೆಡ್ ಅಕೌಂಟ್ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಸಿಎ ಗೌತಮ್ ಪೈ ಡಿ ಉದ್ಘಾಟಿಸಿದರು.
ಸದಾನಂದ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಹಾಗೂ ಪ್ರತಿನಿತ್ಯದ ಕೆಲಸಗಳಿಗೆ ಅಂಟಿಕೊಳ್ಳದೆ ಹೊಸ ಚಿಂತನೆಗಳ ಕಡೆಗೆ ಸಾಗಬೇಕು ಎಂದು ತಿಳಿಸಿದರು. ಅಲ್ಲದೆ ನಿರಂತರ ಕಲಿಯುವಿಕೆ, ಹೊಸಜನರೊಂದಿಗಿನ ಸಹವಾಸ ಮತ್ತು ಮುಕ್ತವಾದ ಅಭಿವ್ಯಕ್ತಿ ನಮ್ಮನ್ನು ಹೆಚ್ಚು ಸೃಜನಶೀಲರನ್ನಾಗಿಸುತ್ತದೆ ಎಂದು ತಮ್ಮ ವಿದ್ಯಾರ್ಥಿ ದಿನಗಳ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಮಾತನಾಡಿ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ ಹಾಗಾಗಿ ವಿದ್ಯಾರ್ಥಿಗಳು ಪ್ರತಿಯೊಂದು ಕೆಲಸಗಳನ್ನು ಶೃದ್ಧೆ, ಆಸಕ್ತಿ ಮತ್ತು ಅಂತಃಕರಣ ಪೂರ್ವಕವಾಗಿ ಮಾಡಲು ಪ್ರಯತ್ನಿಸಬೇಕು ಎಂದರು. ಅಲ್ಲದೇ ಕೌಶಲ್ಯಾಧರಿತ ಕಲಿಕೆಗೆ ಹೆಚ್ಚು ಒತ್ತನ್ನು ವಿದ್ಯಾರ್ಥಿಗಳು ನೀಡಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಪರಿಷತ್ ನ ಕಾರ್ಯದರ್ಶಿ ಮತ್ತು ಸದಸ್ಯರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಅಮನ್ ಎಸ್.ಪಿ 2024-25 ನೇ ಸಾಲಿನ ಉದ್ದೇಶಿತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಾಚಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಶ್ರೀ ರಮೇಶ್ ಎಂ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಮಾಲಿನಿ ಜೆ ರಾವ್ ವಂದಿಸಿದರು. ವಿದ್ಯಾರ್ಥಿ ಚಂದ್ರಮೌಳಿ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸದರು.