ಮಂಗಳೂರು: ಸೆ. 12 ಮತ್ತು 13 ರಂದು ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜು, ನಿಟ್ಟೆ ಆಯೋಜಿಸಿರುವ ವಾಣಿಜ್ಯ, ವಿಜ್ಞಾನ ಮತ್ತು ಐಟಿ ಮಾದರಿಗಳ ಪ್ರದರ್ಶನವನ್ನು ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಗಣಪತಿ ಭಟ್ ಉದ್ಘಾಟಿಸಿದರು.
ನೆರೆದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾಗುವ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಆಗ ಸಾಧನೆಯ ಹೊಸ ಹಾದಿಗಳು ತೆರೆದುಕೊಳ್ಳುತವೆ ಎಂದು ತಿಳಿಸಿದರು. ಹಾಗೆಯೇ ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಿನ ನೆನಪುಗಳನ್ನು ಹಂಚಿಕೊಳ್ಳುತ್ತ ವಿದ್ಯಾರ್ಥಿ ಆಗಿದ್ಧಾಗ ಕಾಲೇಜಿನಲ್ಲಿ ಆಯೋಜಿಸುತ್ತಿದ್ದ ವಿವಿಧ ಕಾರ್ಯಕ್ರಮಗಳು, ಪಠ್ಯೇತರ ಚಟುವಟಿಕೆಗಳು ತನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸುಪ್ತವಾದ ಪ್ರತಿಭೆಯ ಅನಾವರಣಕ್ಕೆ ಪ್ರೇರಣೆಯನ್ನು ನೀಡುತ್ತದೆ ಮತ್ತು ವಿದ್ಯಾರ್ಥಿಗಳನ್ನು ಹೆಚ್ಚು ಕೌಶಲ್ಯಯುತರನ್ನಾಗಿಸಲು ಸಹಕಾರಿಯಾಗಲಿದೆ. ಈ ಹಿನ್ನಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎರೆಡು ದಿನಗಳ ವಾಣಿಜ್ಯ, ವಿಜ್ಞಾನ ಮತ್ತು ಐಟಿ ಮಾದರಿಗಳ ಪ್ರದರ್ಶದಲ್ಲಿ ಕಾರ್ಕಳ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ 3000 ವಿದ್ಯಾರ್ಥಿಗಳು ವೀಕ್ಷಣೆಗಾಗಿ ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜು ನಿಟ್ಟೆಗೆ ಭೇಟಿ ನೀಡಲಿದ್ದಾರೆ ಮತ್ತು ವಿದ್ಯಾರ್ಥಿಗಳು ರಚಿಸಿದ 52 ವಿವಿಧ ಮಾದರಿಗಳು ಅವರನ್ನು ಆಕರ್ಷಿಸುತ್ತದೆ ಎಂದು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರಮೇಶ್ ಎಂ ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಗಣಿತ ನಗರದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಿಸಿದ್ದರು, ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.