ದಕ್ಷಿಣ ಕನ್ನಡ : ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್ ಚೋಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ.
ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 510ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505ರಿಂದ 510 ರೂ. ಇತ್ತು. ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ 500 ರೂ. ಇತ್ತು. ನ. 15 ರಂದು ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂ., ಸಿಂಗಲ್ ಚೋಲ್ ಧಾರಣೆ 420 ರೂ. ತನಕ ಇತ್ತು.
ಕಳೆದ ಮೂರು ದಿನಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್ ಚೋಲ್ ಧಾರಣೆ 10 ರೂ.ನಷ್ಟು ಏರಿಕೆ ಕಂಡಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 335 ರೂ., ಸಿಂಗಲ್ ಚೋಲ್ ಧಾರಣೆ ಕೆ.ಜಿ.ಗೆ 430 ರೂ.ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 350 355 ರೂ., ಸಿಂಗಲ್ ಚೋಲ್ ಧಾರಣೆ 435-438 ರೂ. ತನಕ ಇತ್ತು.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಅಂಗಸಂಸ್ಥೆ ಇಂಟರ್‌ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ (ಐಎಆರ್‌ಸಿ) 2024ರ ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಹೇಳಲಾಗಿದ್ದು ಆದರೆ ಈ ವಿಚಾರ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಡಿಕೆ ಬೇಡಿಕೆ ಸೃಷ್ಟಿಯಾಗಿ ಧಾರಣೆ ಏರಿಕೆ ಕಂಡಿರುವುದು ಇದಕ್ಕೆ ನಿರ್ದಶನ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು.