Bengaluru 30°C
Ad

ಸಮಾಜಮುಖಿ ಚಿಂತನೆಯ ಜೊತೆ ಸಂಘ ಮುನ್ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ: ಕರುಣಾಕರ ಎಂ. ಶೆಟ್ಟಿ

Karunakar (1)

ಮಂಗಳೂರು: ಬಂಟರ ಸಂಘ (ರಿ) ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬಂಟರ ಸಂಘದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತಾಡಿದ ಅವರು, “ಸುರತ್ಕಲ್ ಬಂಟರ ಸಂಘವನ್ನು ಹಿರಿಯರು ಉತ್ಸಾಹದಿಂದ ಕಟ್ಟಿದ್ದಾರೆ. ಇದನ್ನು ಉಳಿಸಿ ಬೆಳೆಸಲು ಇಂದಿನ ಯುವಜನತೆ ಮುಂದಾಗಬೇಕು. ಸಮಾಜಮುಖಿ ಚಿಂತನೆಯ ಜೊತೆ ಸಂಘ ಮುನ್ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ. ಮಕ್ಕಳು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಮರೆಯದೆ ಚೆನ್ನಾಗಿ ಓದಿ ಸಾಧನೆ ಮಾಡಬೇಕು. ತಮ್ಮ ಮುಂದಿನ ಜೀವನದ ಬಗ್ಗೆ ಈಗಲೇ ಗಂಭೀರವಾಗಿ ಚಿಂತಿಸಬೇಕು” ಎಂದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾತನಾಡಿ, “ಹಣ ಎಲ್ಲರಲ್ಲೂ ಇರುತ್ತದೆ ಆದರೆ ಅದನ್ನು ಯೋಗ್ಯರಿಗೆ ದಾನ ಮಾಡಲು ಋಣಾನುಬಂಧ ಬೇಕು. ಸುರತ್ಕಲ್ ಬಂಟರ ಸಂಘದ ವತಿಯಿಂದ ನಡೆಯುವ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿವೆ. ಸುರತ್ಕಲ್ ಬಂಟರ ಸಂಘ ಇನ್ನು ಮುಂದೆಯೂ ಇದೇ ರೀತಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿ” ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಮಾತನಾಡಿ, “ಸುರತ್ಕಲ್ ಬಂಟರ ಸಂಘ ಸದಾ ಕ್ರಿಯಾಶೀಲವಾಗಿದ್ದು ಸುತ್ತಮುತ್ತಲಿನ ಸಂಘಗಳ ಮಧ್ಯೆ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಂಥ ಸಂಘ ಇತರ ಸಂಘಟನೆಗಳಿಗೆ ಮಾದರಿ” ಎಂದರು.

ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಂಟರ ಸಂಘ ಸುರತ್ಕಲ್ ಆರ್ಥಿಕ ಸಹಾಯದೊಂದಿಗೆ ನೂತನವಾಗಿ ನಿರ್ಮಾಣಗೊಂಡ ಮನೆಯ ಕೀ ಅನ್ನು ಸೂರಜ್ ಶೆಟ್ಟಿ ಕಾಟಿಪಳ್ಳ ಅವರಿಗೆ ಹಸ್ತಾಂತರ ಮಾಡಲಾಯಿತು. ಭಿನ್ನ ಸಾಮರ್ಥ್ಯ ಹಾಗೂ ವಿಕಲ ಚೇತನರಿಗೆ ಸಹಾಯಹಸ್ತ ವಿತರಿಸಲಾಯಿತು. ಡಾ.ಪಿ.ವಿ. ಶೆಟ್ಟಿ ಮುಂಬೈ ಇವರಿಂದ ಪ್ರತೀ ವರ್ಷ ನೀಡಲ್ಪಡುವ 1 ಲಕ್ಷ ರೂ. ನಿರಂತರ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿ ಸಂಘ ಹಮ್ಮಿಕೊಳ್ಳುವ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಬೇಕು ಎಂದರು.

ಮುಖ್ಯ ಅತಿಥಿ ಬೆಂಗಳೂರು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಮಾರ್ಲ, ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಮಧ್ಯ, ಸಾಂಸ್ಕ್ರತಿಕ ಕಾರ್ಯದರ್ಶಿ ಜಯರಾಮ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜೀರ್ ಶೆಟ್ಟಿ ಸೂರಿಂಜೆ, ಕ್ರೀಡಾ ಕಾರ್ಯದರ್ಶಿ ಶಿಶೀರ್ ಶೆಟ್ಟಿ ಪೆರ್ಮುದೆ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾನಿಧಿಗೆ ದೇಣಿಗೆ ನೀಡಿದ ಶ್ರೀಮತಿ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಶ್ರೀಕೃಷ್ಣ ಶೆಟ್ಟಿ, ರಾಜೇಶ್ವರಿ ದೇವೇಂದ್ರ ಶೆಟ್ಟಿ ದಂಪತಿಗಳನ್ನು, ಸುಜಾತ ಲೀಲಾಧರ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ, ಸನ್ಮಾನ, ನಿರಂತನ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ವೇತನೆ ವಿತರಿಸಲಾಯಿತು. ಸಹಾಯ ಹಸ್ತ, ನೂತನ ಮನೆಯ ಕೀಯನ್ನು ಸೂರಜ್ ಶೆಟ್ಟಿಗೆ ಮಾಲಾಡಿ ಅಜಿತ್ ಕುಮಾರ್ ರೈ ಹಸ್ತಾಂತರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ‌ನಿರ್ವಹಿಸಿದರು.

ಸಾಂಸ್ಕೃತಿಕ ಸ್ಪರ್ಧೆಯ ಫಲಿತಾಂಶ:
ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸುರತ್ಕಲ್ ಗ್ರಾಮ, ದ್ವಿತೀಯ ಕಾಟಿಪಳ್ಳ -ಕೃಷ್ಣಾಪುರ ಗ್ರಾಮ,
ತೃತೀಯ ಬಹುಮಾನವನ್ನು ಬಾಳ ಗ್ರಾಮ ಮತ್ತು ಇಡ್ಯಾ ಗ್ರಾಮ ಹಂಚಿಕೊಂಡಿತು.
ಪ್ರಹಸನ ಸ್ಪರ್ಧೆಯಲ್ಲಿ ಪ್ರಥಮ ಇಡ್ಯ ಗ್ರಾಮ, ದ್ವಿತೀಯ ಸುರತ್ಕಲ್ ಗ್ರಾಮ, ತೃತೀಯ ಬಹುಮಾನವನ್ನು ಚೇಳಾರು ಗ್ರಾಮ ಪಡೆದುಕೊಂಡಿದೆ.
ತೀರ್ಪುಗಾರರಾಗಿ ನರೇಶ್ ಕುಮಾರ್ ಸಸಿಹಿತ್ಲು, ಸೂರಜ್ ಶೆಟ್ಟಿ ಬಜಪೆ, ಶ್ರೀ ಶೈಲಾ ಮುಲ್ಕಿ ಸಹಕರಿಸಿದರು.

Ad
Ad
Nk Channel Final 21 09 2023
Ad