ಕಡಬ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಡಬದಲ್ಲಿ ಮೋದಿ ಅಭಿಮಾನಿಯೊಬ್ಬರು ಜಡೀ ಮಳೆ ಲೆಕ್ಕಿಸದೆ ಉರುಳು ಸೇವೆ ಮಾಡಿದ್ದಾರೆ.
ಕಡಬದ ಹಿಂದೂ ಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತ, ಸಾಮಾಜಿಕ ಕಾರ್ಯಕರ್ತ ಮೋದಿಯವರ ಅಪ್ಪಟ ಅಭಿಮಾನಿ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ರಘರಾಮ ನ್ಯಾಕ್ ಉರುಳು ಸೇವೆ ಮಾಡಿದವರು.
ಕಡಬ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ತನಕ ಉರುಳುಸೇವೆ ಮಾಡಿದ್ದಾರೆ. ಭಾರೀ ಮಳೆಯ ನಡುವೆಯೂ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯಲ್ಲಿ ಶಂಖ, ಜಾಗಟೆ, ಶಬ್ದದೊಂದಿಗೆ ಜೈಕಾರ ಕೂಗುತ್ತಾ ರಘುರಾಮ ನ್ಯಾಕ್ ಅವರ ಉರುಳು ಸೇವೆಗೆ ಕಾರ್ಯಕರ್ತರು ಪ್ರೋತ್ಸಾಹ ನೀಡಿದರು.
ರಘುರಾಮ ನ್ಯಾಕ್ ಅವರು 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ಥಿತ್ವಕ್ಕೆ ಬಂದಾಗ ಈಶ್ವರಮಂಗಲದ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಒಂದು ವಾರದ ಉಪವಾಸ ವೃತ ಕೈಗೊಂಡಿದ್ದರು. ಈ ಬಾರಿ ಮೋದಿಯವರು ಮತ್ತೆ ಪ್ರಧಾನಿಯಾದರೆ ಉರುಳು ಸೇವೆ ಮಾಡುವ ಹರಕೆ ಹೊತ್ತುಕೊಂಡಿದ್ದರು. ಅಂತೆಯೆ ಅವರು ಹರಕೆಯನ್ನು ತೀರಿಸಿದ್ದಾರೆ.