ಮಂಗಳೂರು : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಕನಿಷ್ಠ ಒಂದು ಸದಸ್ಯತ್ವವನ್ನು ಮಲೆಕುಡಿಯ ಸಮುದಾಯದವರಿಗೆ ಮೀಸಲಿರಿಸಬೇಕು ಎಂದು ರಾಜ್ಯ ಮಲೆಕುಡಿಯ ಸಂಘ ಒತ್ತಾಯಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ನಂಟು ಇದೆ. ದೇವರ ಪರಿಚಾರಕ ವೃತ್ತಿಯಿಂದ ಹಿಡಿದು ಉತ್ಸವ ಕಾರ್ಯಗಳು ಸಾಂಗವಾಗಿ ನೆರವೇರಲು ಮಲೆಕುಡಿಯರು ಶ್ರಮಪಡುತ್ತಾರೆ ವಾರ್ಷಿಕ ಜಾತ್ರೆಯ ಬ್ರಹ್ಮರಥ ಕಟ್ಟುವ ಕಾರ್ಯವನ್ನು ಮಲೆಕುಡಿಯರೇ ನಿರ್ವಹಿಸುತ್ತಾರೆ ಎಂದು ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಅಧ್ಯಕ್ಷ ಶ್ರೀಧರ್ ಗೌಡ ಈದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೀಗ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವ ಬಗ್ಗೆ ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಅರ್ಜಿ ಆಹ್ವಾನಿಸಿದೆ. ಈ ಬಾರಿಯ ವ್ಯವಸ್ಥಪನಾ ಸಮಿತಿಯಲ್ಲಿ ಒಂದು ಸ್ಥಾನವನ್ನು ಮಲೆಕುಡಿಯರಿಗೆ ಮೀಸಲಿಡಬೇಕು, ಈ ಬಗ್ಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಉಲ್ಲೇಖಿಸಬೇಕು. ಹಿಂದಿನ ವ್ಯವಸ್ಥಾಪನಾ ಸಮಿತಿಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಮಲೆಕುಡಿಯರಿಗೆ ಕಾಯ್ದಿರಿಸಲಾಗಿತ್ತು. ಮುಂದಿನ ಸಮಿತಿಯಲ್ಲೂ ಮಲೆಕುಡಿಯರಿಗೆ ಸ್ಥಾನ ನೀಡಬೇಕು.
ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಸಂಘದ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ಜತೆ ಕಾರ್ಯದರ್ಶಿ ಜಯರಾಮ್ ಆಲಂಗಾರು, ಸಂಘಟನಾ ಕಾರ್ಯದರ್ಶಿ ನೋಣಯ್ಯ ರೆಂಜಾಳ, ದ.ಕ ಜಿಲ್ಲಾಧ್ಯಕ್ಷ ಹರೀಶ್ ಎಳನೀರು, ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಉಪಸ್ಥಿತರಿದ್ದರು.