Bengaluru 16°C

ಹೆಚ್ಚುತ್ತಿರುವ ಬಡತನದ ನಡುವೆ ಹೊಸ ಭೂಮಾಲಕ ವರ್ಗ ಸೃಷ್ಟಿ: ಮುನೀರ್ ಕಾಟಿಪಳ್ಳ

ಕ್ಯಾಲೆಂಡರ್ ಗಳು ಬದಲಾದಂತೆ, ಜನತೆಯ ಸಂಕಷ್ಟಗಳು ಹೆಚ್ಚುತ್ತಾ ಹೋಗುತ್ತಿದೆ. ಬದಲಾವಣೆಯ ನಿರೀಕ್ಷೆಗಳು ಹುಸಿಯಾಗುತ್ತಿವೆ.

ಮಂಗಳೂರು: ಕ್ಯಾಲೆಂಡರ್ ಗಳು ಬದಲಾದಂತೆ, ಜನತೆಯ ಸಂಕಷ್ಟಗಳು ಹೆಚ್ಚುತ್ತಾ ಹೋಗುತ್ತಿದೆ. ಬದಲಾವಣೆಯ ನಿರೀಕ್ಷೆಗಳು ಹುಸಿಯಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆ ಪೂರ್ತಿಯಾಗಿ ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್ ಲಾಭಿಗಳ ಕೈಗೆ ಸಿಲುಕಿದೆ. ಅಂದು ಗೇಣಿದಾರ ರೈತರು ನಡೆಸಿದ ಸಮರಶೀಲ ಹೋರಾಟದಿಂದ ಭೂಮಾಲಕ ಪದ್ದತಿ ನಾಶಗೊಂಡಿತ್ತು‌.


ಶಿಕ್ಷಣ, ಆರೋಗ್ಯ ಸಹಿತ ಎಲ್ಲವೂ ಖಾಸಗಿಯವರ ಪಾಲಾಗುತ್ತಿರುವ ಈ ಸಂದರ್ಭ ಹೊಸ ಭೂಮಾಲಕ ವರ್ಗ ಸೃಷ್ಟಿಯಾಗುತ್ತಿದೆ. ಸರಕಾರದ ಉಳ್ಳವರ ಪರ ನೀತಿಗಳಿಂದ ಅಪಾರ ಬಂಡವಾಳ ಶೇಖರಿಸಿರುವ ಧನಿಕರು ನೂರಾರು ಎಕರೆ ಜಮೀನುಗಳನ್ನು ಖರೀದಿಸಿ ನವ ಜಮೀನ್ದಾರಿ ಪದ್ದತಿಯನ್ನು ತುಳುನಾಡಿನಲ್ಲಿ ಸೃಷ್ಟಿಸುತ್ತಿದ್ದಾರೆ. ಇಲ್ಲಿ ಬಡವರು, ಶ್ರೀಮಂತರ ನಡುವಿನ ಅಂತರ ಬೃಹದಾಕಾರಗೊಳ್ಳುತ್ತಿದೆ.


ಹೊಸ ವರ್ಷದ ಸಂದರ್ಭ ದುಡಿಯುವ ಜನರ ಚಳುವಳಿಗಳು ಈ ಕುರಿತು ಗಂಭೀರ ಚಿಂತನೆ ನಡೆಸಬೇಕು. ಈ ವರ್ಷ ಪೂರ್ತಿ ಜನ ಸಾಮಾನ್ಯರು, ದುಡಿಯುವ ವರ್ಗದ ಪರವಾದ ಹೋರಾಟವನ್ನು ತೀವ್ರಗೊಳಿಸಲು ಶ್ರಮಿಸಬೇಕು ಎಂದು ಸಿಪಿಐಎಂ ದ.ಕ‌. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು. ಅವರು ಉಳ್ಳಾಲ ವಲಯ ಸಮಾನ ಮನಸ್ಕ ಸಂಘಟನೆಗಳು ತೊಕ್ಕೊಟ್ಟಿನಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷದ ಸ್ನೇಹಕೂಟ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ್ ಮಾತನಾಡುತ್ತಾ, ಕುಡಿತ, ಮಾದಕ ದ್ರವ್ಯ ಯುವಜನರನ್ನು ಬಲಿಪಡೆಯುತ್ತಿದೆ. ಹೊಸ ವರ್ಷ ಅಂದರೆ ಕುಡಿತ, ಮಾದಕ ದ್ರವ್ಯದ ಯಥೇಚ್ಚ ಬಳಕೆ ಎಂಬಂತೆ ಆಗಿದೆ. ಈ ಕುರಿತು ಯುವಜನತೆಯ ನಡುವೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.


ಯೆನಪೋಯ ವಿ ವಿಯ ಉಪ ಪ್ರಾಂಶುಪಾಲರಾದ ಡಾ. ಜೀವನ್ ರಾಜ್ ಕುತ್ತಾರ್ ಮಾತನಾಡುತ್ತಾ, ಜನತೆಯ ಬದುಕು ಹಸನಾಗಿಸಲು ಚಳವಳಿಗಳು ಇನ್ನಷ್ಟು ಬದ್ದತೆಯಿಂದ ದುಡಿಯಬೇಕಿದೆ ಎಂದು ಹೇಳಿದರು.


ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಸುಕುಮಾರ್ ತೊಕ್ಕೋಟ್ಟುರವರು ಜಿಲ್ಲೆಯ ಜನತೆಯ ಸಂಕಷ್ಟವನ್ನು ವಿವರಿಸಿ ಹೊಸ ವರ್ಷ ಹೋರಾಟದ ವರ್ಷವಾಗಲಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,ದುಡಿಯುವ ವರ್ಗದ ಚಳುವಳಿ ಬಲಗೊಂಡರೆ ಮಾತ್ರವೇ ಜನಸಾಮಾನ್ಯರ ಬದುಕು ಹಸನಾಗುತ್ತದೆ.ಆ ಮೂಲಕ ಸೌಹಾರ್ದತೆ ನೆಲೆಗೊಂಡು,ಮಾನವೀಯತೆ ಬೆಳಗುತ್ತದೆ ಎಂದು ಹೇಳಿದರು.


ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಅಭೂತಪೂರ್ವ ಜಯಗಳಿಸಿದ ಗಣೇಶ್ ಅಡ್ಯಂತಾಯರವರನ್ನು ಹ್ರದಯಸ್ಪರ್ಶಿಯಾಗಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ರೈತ ಚಳುವಳಿಯ ಹಿರಿಯ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್, CITU ಉಳ್ಳಾಲ ತಾಲೂಕು ಕಾರ್ಯದರ್ಶಿ ರೋಹಿದಾಸ್ ಭಟ್ನಗರ, DYFI ಉಳ್ಳಾಲ ವಲಯಾಧ್ಯಕ್ಷರಾದ ನಿತಿನ್ ಕುತ್ತಾರ್ ರವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ರೈತ ನಾಯಕರಾದ ಶೇಖರ್ ಕುಂದರ್,ಕಾರ್ಮಿಕ ಮುಖಂಡರಾದ ಸುಂದರ ಕುಂಪಲ,ಜನಾರ್ಧನ ಕುತ್ತಾರ್, ಚಂದ್ರಹಾಸ್ ಪಿಲಾರ್,ಇಬ್ರಾಹಿಂ ಮದಕ,ಪದ್ಮನಾಭ ಕುಂಪಲ, ರಾಮಚಂದ್ರ ಪಜೀರ್, ವಿಲಾಸಿನಿ,ರತ್ನಮಾಲಾ,ರಫೀಕ್ ಹರೇಕಳ,ಮಹಮ್ಮದ್ ಅನ್ಸಾರ್,ಯುವಜನ ನಾಯಕರಾದ ರಿಜ್ವಾನ್ ಹರೇಕಳ,ಮಿಥುನ್ ರಾಜ್ ಕುತ್ತಾರ್,ರಜಾಕ್ ಮುಡಿಪು, ಅಸ್ಪಕ್ ಅಳೇಕಲ,ಕಲೀಲ್ ಉಳ್ಳಾಲಬೈಲ್,ಮಹಿಳಾ ಮುಖಂಡರಾದ ಪ್ರಮೋದಿನಿ, ನಳಿನಾಕ್ಷಿ ಶೆಟ್ಟಿ ಮುಂತಾದವರು ಹಾಜರಿದ್ದರು.


Nk Channel Final 21 09 2023