ಮಂಗಳೂರು: ರಾತ್ರೋ ರಾತ್ರಿ ದಂಪತಿ ನೇಣಿಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ದಂಪತಿಯನ್ನು ನೊಣಯ್ಯ ಪೂಜಾರಿ (63) ಹಾಗೂ ಪತ್ನಿ ಬೇಬಿ (46) ಎಂದು ಗುರುತಿಸಲಾಗಿದೆ.
ಇವರು ಬೆಳ್ತಂಗಡಿ ತಾಲೂಕಿನ ಕಾಶಿಪಟ್ನದ ಉರ್ದುಗುಡ್ಡೆ ನಿವಾಸಿಗಳು. ಈ ದಂಪತಿ ಮನೆ ಸಮೀಪದ ಗುಡ್ಡದಲ್ಲಿ ಗುರುವಾರ ತಡರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದೆ. ನೋಣಯ್ಯ ಪೂಜಾರಿಯ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದ್ದರು.
ಈ ದಂಪತಿಗೆ 5 ಗಂಡು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ. ಇತ್ತ ಪತ್ನಿ ತೀರಿಕೊಂಡ ಬಳಿಕ ನೋಣಯ್ಯ ಅವರು ಬೇಬಿಯನ್ನು ಎರಡನೇ ಮದುವೆಯಾಗಿದ್ದರು. ಕಳೆದ ಐದು ವರ್ಷದಿಂದ ನೊಣಯ್ಯ ಪೂಜಾರಿ ತಲೆನೋವಿನಿಂದ ಬಳಲುತ್ತಿದ್ದು, ಇದರಿಂದ ನೊಂದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
Ad