Bengaluru 18°C

ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ವಿರುದ್ಧ ಭ್ರಷ್ಟಾಚಾರ ಆರೋಪ

ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌ ಸಾಮಾನ್ಯ ಸಭೆಯಲ್ಲೇ ಗಂಭೀರವಾದ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದು,

ಮಂಗಳೂರು : ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌ ಸಾಮಾನ್ಯ ಸಭೆಯಲ್ಲೇ ಗಂಭೀರವಾದ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದು, ಇಡೀ ಸದನ ಯಾವುದೇ ವಿರೋಧವಿಲ್ಲದೆ ಮೌನವಾಗಿ ಸಹಮತ ವ್ಯಕ್ತಪಡಿಸಿದ ಅಪರೂಪದ ಘಟನೆ ನಡೆದಿದೆ.


ಸಾಮಾನ್ಯ ಸಭೆಯ ಆರಂಭದಲ್ಲಿ ಕಲುಷಿತ ಕುಡಿಯುವ ನೀರಿನ ವಿಚಾರ, ಒಳಚರಂಡಿ ಅವ್ಯವಸ್ಥೆ ಚರ್ಚೆಯ ಬಳಿಕ ಈ ವಿಚಾರ ಕೈಗೆತ್ತಿಕೊಂಡ ಅಬ್ದುಲ್‌ ರವೂಫ್‌, ದಾಖಲೆಗಳನ್ನು ತೋರಿಸಿ ನೇರವಾಗಿ ಆಯುಕ್ತರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ಮಹಾನಗರ ಪಾಲಿಕೆಯ ದಕ್ಷತೆಯ ಇತಿಹಾಸದ ಪೀಠಿಕೆಯನ್ನು ಹಾಕಿ ಸುದೀರ್ಘವಾಗಿ ಅಬ್ದುಲ್‌ ರವೂಫ್‌ ಮಾತನಾಡುತ್ತಿದ್ದರೆ ಆಡಳಿತ ಪಕ್ಷದ ಯಾರೊಬ್ಬ ಸದಸ್ಯರೂ ಮರುಮಾತನಾಡದೆ ತಮ್ಮ ಪರೋಕ್ಷ ಒಪ್ಪಿಗೆ ಸೂಚಿಸಿದರು.


ಒಂದು ಹಂತದಲ್ಲಿ ಸ್ವತಃ ಆಯುಕ್ತರು ಸ್ಪಷ್ಟನೆ ನೀಡಲು ಮುಂದಾದರೂ ಮೇಯರ್‌ ಅದಕ್ಕೆ ಹೆಚ್ಚಿನ ಅವಕಾಶ ನೀಡದೆ ವಿಪಕ್ಷ ಸದಸ್ಯರಿಗೆ ಮಾತು ಮುಂದುವರಿಸಲು ಸೂಚಿಸಿದ್ದು, ಇಡೀ ಸದನ ಈ ವಿಚಾರದಲ್ಲಿ ಒಗ್ಗಟ್ಟಾಗಿದೆ ಎಂಬ ಸ್ಪಷ್ಟ ಸಂದೇಶ ಸಾರಿತ್ತು.


ಆರೋಪಗಳೇನು?:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 20 ವರ್ಷಕ್ಕಿಂತಲೂ ಹಿಂದೆ ನಿರ್ಮಾಣವಾದ ಅನೇಕ ವಸತಿ, ಕಮರ್ಷಿಯಲ್‌ ಕಟ್ಟಡಗಳು ಕಾನೂನು ಪ್ರಕಾರ ನಿರ್ಮಾಣವಾಗಿಲ್ಲ ಅಂತ ಅವೆಲ್ಲದಕ್ಕೂ ಇಷ್ಟು ವರ್ಷ ಕಳೆದರೂ, ಹಲವು ಆಯುಕ್ತರು ಬಂದು ಹೋಗಿದ್ದರೂ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಿರಲಿಲ್ಲ. ಆದರೆ ಈಗಿನ ಆಯುಕ್ತರು ಬಂದ ಬಳಿಕ ಅಂತಹ ಕಟ್ಟಡಗಳಿಗೆ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಿದ್ದಾರೆ. ಯಾವ ಆಧಾರದ ಮೇಲೆ ನೀಡಿದ್ದು? ಇದು ಭ್ರಷ್ಟಾಚಾರ ಅಲ್ವಾ ಅಂತ ಅಬ್ದುಲ್‌ ರವೂಫ್‌ ಆರೋಪಿಸಿದರು.


ಇಬ್ಬರು ಎಇಇ, ಇಬ್ಬರು ಜೆಇ ಅಧಿಕಾರಿಗಳಿಗೆ 29 ದಿನ ಚಾರ್ಜ್‌ ನೀಡದೆ ಸತಾಯಿಸಿದ್ದಾರೆ, ಪಾಲಿಕೆಯಲ್ಲಿ 30 ವರ್ಷಗಳ ಅನುಭವ ಇರುವ ಜೆಇ, ಎಇಇಗಳನ್ನು ಬಿಟ್ಟು ಡೆಪ್ಯುಟೇಶನ್‌ ಮೇಲೆ ಬಂದವರಿಗೆ ಸೀನಿಯರ್‌ ಎಂಜಿನಿಯರ್‌ ಚಾರ್ಜ್‌ ನೀಡಿದ್ದಾರೆ. ಇದರಲ್ಲಿ ಯಾವ ಉದ್ದೇಶ ಇತ್ತು ಎಂದು ಪ್ರಶ್ನಿಸಿದರು.


ವಿವಿಧ ಕಾಮಗಾರಿಗಳಿಗೆ ಪಾಲಿಕೆಯಲ್ಲಿ ಕೇವಲ 60 ಕೋಟಿ ರು. ಹಣ ಇರುವುದು ಗೊತ್ತಿದ್ದೂ 160 ಕೋಟಿ ರು.ಗಳನ್ನು ಆಯುಕ್ತರು ಮಂಜೂರು ಮಾಡಿಸಿದ್ದಾರೆ. ತುರ್ತು ಕಾಮಗಾರಿಗಳಿಗೆ 5 ಲಕ್ಷ ರು.ವರೆಗೆ ರಿಯಾಯ್ತಿ ಇದೆ. ಆದರೆ ಆಯುಕ್ತರು ಸದಸ್ಯರನ್ನು ಕತ್ತಲೆಯಲ್ಲಿಟ್ಟು 1 ಲಕ್ಷ ರು.ಗಿಂತ ಹೆಚ್ಚಿನ ಕಾಮಗಾರಿಗಳಿಗೆ ಇ-ಟೆಂಡರ್‌ ಆದೇಶ ಮಾಡಿದ್ದಾರೆ ಎಂದರು.


ಈ ಸಂದರ್ಭ ಆಯುಕ್ತರು ‘ದಾಖಲೆ ಇದ್ದರೆ ಕೊಡಿ, ಸುಮ್ಮನೆ ಆರೋಪ ಮಾಡಬೇಡಿ’ ಎಂದು ಕೇಳಿದ್ದಕ್ಕೆ ದಾಖಲೆಗಳ ಪ್ರತಿಗಳನ್ನು ಮೇಯರ್‌ಗೆ ಅಬ್ದುಲ್ ರವೂಫ್‌ ನೀಡಿದರು. ಆಯುಕ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಹಾದಿ ಬೀದಿಯಲ್ಲಿ ಕೂಡ ಜನರು ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಸರ್ಕಾರದ ತನಿಖೆಗೆ ಪತ್ರ ಬರೆಯುವಂತೆ ಮೇಯರ್‌ಗೆ ಒತ್ತಾಯಿಸಿದರು.


ಬಳಿಕ ಆಯುಕ್ತರು ತಮ್ಮ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಅದಕ್ಕೆ ರವೂಫ್‌ ಆಕ್ಷೇಪ ಎತ್ತಿದರು. ಕೊನೆಗೆ, ಆಯುಕ್ತರ ಬಗ್ಗೆ ಇಂಥ ಆರೋಪ ಬಂದಿರುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮೇಯರ್‌ ಮನೋಜ್‌ ಕೋಡಿಕಲ್‌ ರೂಲಿಂಗ್‌ ನೀಡಿದರು.


Nk Channel Final 21 09 2023