ಮಂಗಳೂರು: ಜೇಸಿಐ ಪಡುಬಿದ್ರೆ ಇದರ 50ನೇ ವರ್ಷಾಚರಣೆ ಪ್ರಯುಕ್ತ ಉಡುಪಿ ಟೂರಿಸಂ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ನ.23 ಮತ್ತು 24ರಂದು ಪಡುಬಿದ್ರಿ ಬೀಚ್ ನಲ್ಲಿ ‘ಕೋಸ್ಟಲ್ ಕಾರ್ನಿವಲ್ ಪಡುಬಿದ್ರಿ- 2024’ ಆಯೋಜಿಸಲಾಗಿದೆ.
ನ.23ರಂದು ಬೆಳಗ್ಗೆ 7 ಗಂಟೆಗೆ ಬೀಚ್‌ನಲ್ಲಿ 4ನೇ ರಾಷ್ಟ್ರೀಯ ಜ್ಯೂನಿಯರ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ. ಸಾಯಂಕಾಲ 6ಕ್ಕೆ ಪಡುಬಿದ್ರೆ ಬೀಚ್‌ನಲ್ಲಿ ಕಾರ್ನಿವಲ್‌ಗೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದ್ದಾರೆ ಎಂದು ಕಾರ್ನಿವಲ್ ಆಯೋಜನಾ ಸಮಿತಿ ಅಧ್ಯಕ್ಷ ವೈ ಸುಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.24ರಂದು ಬೆಳಗ್ಗೆ 7ಕ್ಕೆ ‘ಬಲೇ ಬಲಿಪುಗ’ 3 ಕಿ.ಮೀ.ಬೀಚ್ ರನ್ (ಬರಿಗಾಲಿನಲ್ಲಿ) ನಡೆಯಲಿದೆ. ಸಾಯಂಕಾಲ 5ಕ್ಕೆ ಜೆಸಿಐ ಪಡುಬಿದ್ರೆ 50ನೇ ವರ್ಷಾಚರಣೆ ಕಾರ್ಯಕ್ರಮ ಅಧ್ಯಕ್ಷ ಸಂಜೀತ್ ಎರ್ಮಾಳ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. 7ರಿಂದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಎರಡು ದಿನಗಳ ಕಾಲ ಬೀಚ್ ಕಬಡ್ಡಿ, ಹಗ್ಗಜಗ್ಗಾಟ, ಮೀನು ಹಿಡಿಯುವ ಸ್ಪರ್ಧೆ, ಮರಳು ಶಿಲ್ಪ ರಚನೆ ಸ್ಪರ್ಧೆಗಳು ನಡೆಯಲಿದ್ದು, ಎಡ್ಸ್ಟಾಲ್, ಅಮ್ಯೂಸ್‌ಮೆಂಟ್ ಗೇಮ್ ಗಳು ಇರಲಿವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಸಂಘಟಕರಾ ವೇಣು.ಜಿ., ಉದಯ ಕಾಮತ್ ಉಪಸ್ಥಿತರಿದ್ದರು.