ಬಂಟ್ವಾಳ: ಬೆಂಗಳೂರಿನಿಂದ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಬಂಟ್ವಾಳಕ್ಕೆ ಬರುವ ವೇಳೆ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಇರುವ ಬಾಕ್ಸ್ ಒಂದು ಕಳವಾಗಿರುವ ಘಟನೆ ನಡೆದಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ನಿವಾಸಿ ರಾಜಗೋಪಾಲ್ ಕಾರಂತ ಎಂಬವರು ದೂರು ನೀಡಿದ್ದಾರೆ.
ಒಟ್ಟು 10,08,000 ಮೌಲ್ಯದ 144 ಗ್ರಾಂ ಚಿನ್ನ, ರೂ. 3000 ನಗದು ಕಳ್ಳತನ ವಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಬೆಂಗಳೂರು ಯಲಹಂಕ ನಿವಾಸಿ ರಾಜಗೋಪಾಲ್ ಕಾರಂತ ಅವರ ಪತ್ನಿ ಮನೆ ಬಂಟ್ವಾಳದ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ ಇದ್ದು, ಪತ್ನಿಯ ಊರಿನಲ್ಲಿ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನದ ಬಾಕ್ಸ್ ನ ಜೊತೆ ನಗದು ಇರಿಸಿಕೊಂಡು, ಪತ್ನಿ ಹಾಗೂ ಅಳಿಯನ ಜೊತೆ ಬೆಂಗಳೂರು ಮೆಜೆಸ್ಟಿಕ್ ನಿಂದ ಬಸ್ ನ ಮೂಲಕ ಹೊರಟಿದ್ದರು.
ಬಸ್ ಕುಣಿಗಲ್ ಎಂಬಲ್ಲಿ ನಿಲ್ಲಿಸಿದಾಗ ಮೂವರು ಬ್ಯಾಗ್ ನ್ನು ಬಸ್ ನಲ್ಲಿಯೇ ಇರಿಸಿ ಶೌಚಾಲಯಕ್ಕೆ ಹೋಗಿ ಬಂದಿದ್ದರು. ಇದಾದ ಬಳಿಕ ಬಂಟ್ವಾಳದ ವಗ್ಗ ಕಾರಿಂಜ ಕ್ರಾಸ್ ಇವರ ಊರಿನ ಬಸ್ ನಿಲ್ದಾಣದಲ್ಲಿ ಇಳಿದು ಬ್ಯಾಗ್ ನ್ನು ತೆರೆದು ನೋಡಿದಾಗ ಚಿನ್ನ ಹಾಗೂ ನಗದು ಇರಿಸಿದ್ದ ಬ್ಯಾಗ್ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ.
ಹಾಗಾಗಿ ಬಸ್ ನಲ್ಲಿ ಅಥವಾ ಕುಣಿಗಲ್ ಬಳಿ ಕಳ್ಳತನ ವಾಗಿರುವ ಶಂಕೆಯನ್ನು ದೂರುದಾರರು ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.