ಉಳ್ಳಾಲ: ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಎಂಬಲ್ಲಿ ಬಜರಂಗದಳ ಕಾರ್ಯಕರ್ತನಿಗೆ ಕಾಂಗ್ರೆಸ್ ಕಾರ್ಯಕರ್ತ ಹಲ್ಲೆ ಮಾಡಿದ ಅರೋಪ ಕೇಳಿಬಂದಿದೆ.
ಕುಂಪಲ ನಿವಾಸಿ ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಹಲ್ಲೆಗೊಳಗಾದವರು.
ನಿನ್ನೆ ಚುನಾವಣೆ ಫಲಿತಾಂಶದ ಬಳಿಕ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಕೇಸರಿ ಮಿತ್ರ ವೃಂದದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು.
ಅದೇ ವಿಷ್ಯಕ್ಕೆ ಸಂಬಂಧಿಸಿದಂತೆ ಇಂದು ಕೆಲಸದಿಂದ ವಾಪಸ್ಸಾಗುತ್ತಿದ್ದ ಪ್ರವೀಣ್ ಪೂಜಾರಿಯನ್ನ ಅಡ್ಡಗಟ್ಟಿದ ಸ್ಥಳೀಯ ಕೇಸರಿ ಮಿತ್ರ ವೃಂದದ ಸದಸ್ಯ ಗೌತಮ್ ಪ್ರವೀಣ್ ಪೂಜಾರಿ ಮೇಲೆ ಹಲ್ಲೆ ನಡೆಸಿ ದೂಡಿದ್ದು, ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯಗಳಾಗಿದ್ದು, ಆತನನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆ ನಡೆಸಿದ ಗೌತಮ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಪಟಾಕಿ ಸಿಡಿಸಿದ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ.
ಈ ಕುರಿತು ಉಳ್ಳಾಲ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.