ಮಂಗಳೂರು : ಧರ್ಮೋಪದೇಶ ನೀಡುವಾಗ ಹಠಾತ್ತನೆ ಪ್ರಜ್ಞಾಹೀನರಾಗಿ ಆಸ್ಪತ್ರೆಗೆ ದಾಖಲಾದ ಜರ್ಮನ್ ಪ್ರಜೆ ರೆವರೆಂಡ್ ಫಾದರ್ ವೂಲ್ಫ್ಗ್ಯಾಂಗ್ ಲಿಯಾನ್ಹಾರ್ಡ್(65) ಅವರಿಗೆ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ವತಿಯಿಂದ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು.
ಆ ಮೂಲಕ ಗಮನಾರ್ಹವಾದ ನೈಪುಣ್ಯ ಮತ್ತು ಹೃದಯ ಆರೈಕೆಯನ್ನು ಆಸ್ಪತ್ರೆಯು ಪ್ರದರ್ಶಿಸಿತು. ಫಾದರ್ ಲಿಯಾನ್ಹಾರ್ಡ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರ ಹೃದಯವು ಬಡಿತವು ಅತ್ಯಂತ ಕಡಿಮೆಯಿತ್ತು, ನಿಮಿಷಕ್ಕೆ ಕೇವಲ 38-40 ಬಡಿತದಷ್ಟಿತ್ತು. ಪರೀಕ್ಷೆ ನಡೆಸಲಾಗಿ, ಹೃದಯದಲ್ಲಿ ರಕ್ತಚಲನೆ ಸಂಪೂರ್ಣ ನಿರ್ಬಂಧಿತವಾಗಿರುವುದು ತಿಳಿದುಬಂದಿತು.
ರೋಗಿಗೆ ʻಹೈಪರ್ಟ್ರೋಫಿಕ್ ಅಬ್ಸ್ಟ್ರಕ್ಟಿವ್ ಕಾರ್ಡಿಯೋಮಯೋಪತಿʼ(ಎಚ್ಒಸಿಎಂ) ಇರುವುದು ಪತ್ತೆಯಾಯಿತು. ಇದೊಂದು ಹೃದಯದಲ್ಲಿ ವಿದ್ಯುನ್ಮಾನ ಲಯಗಳಿಗೆ ತೀವ್ರ ಅಡಚಣೆ ಉಂಟುಮಾಡುವ ಆನುವಂಶಿಕವಾದ ಹೃದಯ ಸ್ಥಿತಿಯಾಗಿದೆ. ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಅವರು ಮಾತನಾಡಿ, ಇಂತಹ ಅತ್ಯಧಿಕ ಅಪಾಯದ ಹೃದಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆಸ್ಪತ್ರೆಯು ಸಾಕಷ್ಟು ಸಜ್ಜಾಗಿದೆ ಎಂದು ವಿಶ್ವಾಸದಿಂದ ಹೇಳಿದರು.
“ಕೆಎಂಸಿ ಆಸ್ಪತ್ರೆಯ ನಮ್ಮ ತಂಡವು ಯಾವುದೇ ರೀತಿಯ ಹೃದಯ ತುರ್ತುಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿದೆ, ಅದು ಎಷ್ಟೇ ಸಂಕೀರ್ಣವಾಗಿದ್ದರೂ ಸರಿ. ಹೃದಯ ಆರೈಕೆಯಲ್ಲಿ ಇತ್ತೀಚಿನ ಪ್ರಗತಿಯನ್ನು ಬಳಸಿಕೊಂಡು ಚಿಕಿತ್ಸೆ ನೀಡಲು ನಾವು ಹೆಮ್ಮೆಪಡುತ್ತೇವೆ. ರೆವರೆಂಡ್ ಫಾದರ್ ಲಿಯಾನ್ಹಾರ್ಡ್ ಅವರ ಪ್ರಕರಣವು ಸವಾಲಿನದ್ದಾಗಿತ್ತು, ಆದರೆ ನಮ್ಮ ನುರಿತ ಹೃದ್ರೋಗ ತಜ್ಞರು ಮತ್ತು ಸುಧಾರಿತ ವೈದ್ಯಕೀಯ ತಂತ್ರಜ್ಞಾನದ ಸಂಯೋಜನೆಯಿಂದಾಗಿ ನಾವು ಜೀವ ರಕ್ಷಕ ಚಿಕಿತ್ಸೆ ಒದಗಿಸಲು ಸಾಧ್ಯವಾಯಿತು,” ಎಂದು ಹೇಳಿದರು.
ಫಾದರ್ ಲಿಯಾನ್ಹಾರ್ಡ್ ಅವರ ಸ್ಥಿತಿಗೆ ಹೃದಯದ ಲಯವನ್ನು ಸ್ಥಿರಗೊಳಿಸಲು ಮತ್ತು ಭವಿಷ್ಯದ ಯಾವುದೇ ತೊಡಕುಗಳನ್ನು ತಡೆಗಟ್ಟಲು ʻಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ʼ(ಐಸಿಡಿ)ಜೊತೆ ಶಾಶ್ವತ ಪೇಸ್ ಮೇಕರ್ ಅಳವಡಿಸುವ ಅಗತ್ಯವಿತ್ತು. ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಮನೀಶ್ ರೈ ಅವರು ಈ ಕಾರ್ಯವಿಧಾನದ ಸಂಕೀರ್ಣತೆಯನ್ನು ವಿವರಿಸಿದರು.
“ಈ ರೋಗಿಗೆ ʻಹೈಪರ್ಟ್ರೋಫಿಕ್ ಕಾರ್ಡಿಯೋಮಯೋಪತಿʼ ಎಂಬ ಆನುವಂಶಿಕ ಕಾಯಿಲೆ ಇತ್ತು, ಇದು ಹೃದಯದ ಸ್ನಾಯುಗಳು ದಪ್ಪವಾಗಲು ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಹೃದಯದ ವಿದ್ಯುನ್ಮಾಯ ಲಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಫಾದರ್ ಲಿಯಾನ್ಹಾರ್ಡ್ನ ಪ್ರಕರಣದಲ್ಲಿ, ಈ ಸ್ಥಿತಿಯು ಸಂಪೂರ್ಣ ಹೃದಯ ಸ್ತಂಭನಕ್ಕೆ ಕಾರಣವಾಯಿತು, ಇದರಿಂದಾಗಿ ಅವರ ಹೃದಯ ಬಡಿತವು ಅತ್ಯಂತ ಅಪಾಯಕಾರಿ ಎನ್ನುವಷ್ಟು ನಿಧಾನವಾಗಿತ್ತು. ನಾವು ʻಡ್ಯುಯಲ್ ಚೇಂಬರ್ ಡಿಫಿಬ್ರಿಲೇಟರ್ ʼ ಅನ್ನು ಅಳವಡಿಸಿದ್ದೇವೆ. ಇದು ಎಡಭಾಗದ ಭುಜದ ಮೂಳೆ (ಕಾಲರ್ಬೋನ್) ಬಳಿ ಚರ್ಮದ ಕೆಳಗೆ ಇರಿಸಲಾದ ಸಣ್ಣ ಸಾಧನವಾಗಿದೆ, ಇದು ಹೃದಯದ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗ ಹೃದಯ ಬಡಿತವು ಅಪಾಯಕಾರಿಯಾಗಿ ವೇಗವಾದರೆ ಆಘಾತವನ್ನು ನೀಡುತ್ತದೆ, ʼʼ ಎಂದು ಹೇಳಿದರು.
ʻಡ್ಯುಯಲ್-ಚೇಂಬರ್ ಡಿಫಿಬ್ರಿಲೇಟರ್ʼ ಎಂಬುದು ರೋಗಿ-ನಿರ್ದಿಷ್ಟವಾದದ್ದು. ಅಂದರೆ, ಇದನ್ನು ಪ್ರತಿ ರೋಗಿಯ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತದೆ. ವಿದ್ಯುನ್ಮಾನ ಹಸ್ತಕ್ಷೇಪದ ಸಂದರ್ಭದಲ್ಲಿ, ಇದು ಹೃದಯದ ಬಡಿತ ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಡಾ. ಮನೀಶ್ ರೈ ಅವರ ಪ್ರಕಾರ, “ಹೈಪರ್ಟ್ರೋಫಿಕ್ ಕಾರ್ಡಿಯೋಮಯೋಪತಿ ತುಂಬಾ ನಿಧಾನ ಅಥವಾ ವೇಗದ ಹೃದಯ ಬಡಿತಕ್ಕೆ ಕಾರಣವಾಗಬಹುದು, ಇವೆರಡೂ ಮಾರಣಾಂತಿಕವಾಗಬಹುದು. ʻಐಸಿಡಿʼ ಅಳವಡಿಕೆಯು ಫಾದರ್ ಲಿಯಾನ್ಹಾರ್ಡ್ಗೆ ಹೆಚ್ಚು ಕಾಲ ಮತ್ತು ಆರೋಗ್ಯಕರವಾಗಿ ಬದುಕಲು ಅನುವು ಮಾಡಿಕೊಡುತ್ತದೆ.ʼʼ
ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, “ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗವು ಹೃದಯ ತಜ್ಞರ ಅತ್ಯಂತ ನುರಿತ ತಂಡವನ್ನು ಹೊಂದಿದೆ ಮತ್ತು ಹೃದಯದ ಲಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿರ್ವಹಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಸ್ಥಳೀಯ ಮತ್ತು ಅಂತರರಾಷ್ಟ್ರೀಯ ರೋಗಿಗಳಿಗೆ ವಿಶ್ವದರ್ಜೆಯ ಆರೈಕೆಯನ್ನು ಒದಗಿಸಲು ನಾವು ಸಜ್ಜಾಗಿದ್ದೇವೆ,ʼʼ ಎಂದು ಹೇಳಿದರು.
ಫಾದರ್ ಲಿಯಾನ್ಹಾರ್ಡ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಪೇಸ್ ಮೇಕರ್ ನೆರವಿನಿಂದ ಅವರ ಹೃದಯದ ನಿರಂತರ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ, ಫಾದರ್ ಲಿಯಾನ್ಹಾರ್ಡ್ ಅವರು ಇನ್ನು ಮುಂದೆ ಮತ್ತಷ್ಟು ವಿಶ್ವಾಸದಿಂದ ತಮ್ಮ ದೈನಂದಿನ ಕರ್ತವ್ಯಗಳನ್ನು ಮುಂದುವರಿಸಲು ಅವಕಾಶವಿದೆ.