ಬಂಟ್ವಾಳ : ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಕೆದಿಲ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಇಲ್ಲಿನ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ ಸುಭೋದ್(14) ಎಂದು ಗುರುತಿಸಲಾಗಿದೆ.
ಇಂದು ಸಂಜೆ 5.30ರ ಸುಮಾರಿಗೆ ಮನೆಯ ಸಿಟೌಟ್ ನಲ್ಲಿ ಕುಳಿತ್ತಿದ್ದ ವೇಳೆ ಸಿಡಿಲುಬಡಿದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ. ತಕ್ಷಣ ಮನೆಮಂದಿ ಮಾಣಿಯ ಕ್ಲಿನಿಕ್ ವೊಂದಕ್ಕೆ ಕರೆತಂದಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.ಅದರಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗಾಗಲೆ ಬಾಲಕ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಬಳಿಕ ಮೃತಶರೀರವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಶವಮಹಜರು ಮಾಡಲು ಕಳುಹಿಸಲಾಗಿದೆ. ಶುಭೋದ್ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 8 ತರಗತಿ ವಿದ್ಯಾರ್ಥಿಯಾಗಿದ್ದ. ಮುಂದಿನ ಪರಿಹಾರ ಕ್ರಮಕ್ಕೆ ತಹಶೀಲ್ದಾರ್ ಅರ್ಚನಾ ಭಟ್ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಅನಿಲ್ ಕುಮಾರ್, ಕೆದಿಲ ಗ್ರಾಮಪಂಚಾಯತ್ ಅಧ್ಯಕ್ಷ ಹರೀಶ್ ವಾಲ್ತಾಜೆ, ಸದಸ್ಯರಾದ ಉಮೇಶ್ ಮುರುವ, ಹಝೀಝ್ ರವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.